ಇಂಧನ ಸಪ್ತಾಹಕ್ಕೆ ಪ್ರಧಾನಿ ಮೋದಿ ಚಾಲನೆ, ಇಂಧನ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ: ನರೇಂದ್ರ ಮೋದಿ | JANATA NEWS

ಬೆಂಗಳೂರು : ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವತಿಯಿಂದ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ 'ಇಂಡಿಯನ್ ಎನರ್ಜಿ ವೀಕ್-2023'ಅನ್ನು ಉದ್ಘಾಟಿಸಿದ್ದಾರೆ.
ಬೆಂಗಳೂರಿನ ಎಚ್ಎಎಲ್ನಿಂದ ಮಾದಾವರದಲ್ಲಿರುವ ಬಿಐಇಸಿ (ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ)ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ಆಗಮಿಸಿದರು. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸ್ವಾಗತ ಕೋರಿದರು.
ಇಂಧನ ಸಪ್ತಾಹ ಉದ್ಘಾಟಿಸಿದ ಪ್ರಧಾನಿ ಮೋದಿ, ಜಾಗತಿಕ ತೈಲ ಮತ್ತು ಗ್ಯಾಸ್ ಕಂಪನಿಗಳ ಸಿಇಓಗಳ ರೌಂಟ್ ಟೇಬಲ್ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ದೇಶದ 11 ರಾಜ್ಯಗಳ 84 ಎಥನಾಲ್ ಮಿಶ್ರಿತ ಪೆಟ್ರೋಲ್ ಬಂಕ್‌ಗಳ ಉದ್ಘಾಟನೆ ಮಾಡಲಿದ್ದಾರೆ.
ಪೆಟ್ರೋಲ್, ಡೀಸೆಲ್ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣದ ಬಂಕ್ಗಳು ಇದಾಗಲಿದೆ. ಹಸಿರು ಇಂಧನದಲ್ಲಿ ಚಲಿಸುವ ವಾಹನಗಳ ಉದ್ಘಾಟನೆ ಮಾಡಲಿದ್ದಾರೆ. ಹಸಿರು ಇಂಧನ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಪಿಜಿ ಡೆಲಿವರಿ, ಪೆಟ್ರೋಲ್ ಸಿಬ್ಬಂದಿಗೆ ಏಕಬಳಕೆಯ ಪ್ಲಾಸ್ಟಿಕ್ನಿಂದ ತಯಾರಿಸಿದ ಸಮವಸ್ತ್ರದ ಅನಾವರಣವನ್ನು ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಟರ್ಕಿ ಮತ್ತು ಸುತ್ತಮುತ್ತಲ ದೇಶಗಳಲ್ಲಿ ಸಾವು ಮತ್ತು ವಿನಾಶಕ್ಕೆ ಸಂತಾಪ ಸೂಚಿಸುವ ಮೂಲಕ ಭಾಷಣ ಆರಂಭಿಸಿದ ಪ್ರಧಾನಿ ಮೋದಿ "ವಿಪತ್ತಿನ ಸಂದರ್ಭದಲ್ಲಿ ಸಾಧ್ಯವಿರುವ ಯಾವುದೇ ನೆರವು ನೀಡಲು ಭಾರತ ಸಿದ್ಧವಿದೆ" ಎಂದು ತಿಳಿಸಿದರು. ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ಅತ್ಯಂತ ಮುಂದುವರೆದ ರಾಷ್ಟ್ರಗಳ ಪೈಕಿ ಒಂದಾಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಇಂಧನದ ಬೇಡಿಕೆ ಹೆಚ್ಚಾಗುತ್ತಿದೆ.
ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಅಭಿವೃದ್ದಿಯನ್ನು ಗಮನಿಸುತ್ತಿದ್ದರೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಹಲವು ಹೊಸ ನಗರಗಳು ರೂಪುಗೊಳ್ಳಲಿವೆ ಎನ್ನುವುದನ್ನು ತೋರಿಸುತ್ತದೆ. ಭಾರತದಲ್ಲಿ ಇಂಧನದ ಬೇಡಿಕೆಯು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಹಾಗೂ ಸಹವರ್ತಿಗಳಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದ್ದಾರೆ.
ದೇಶದಲ್ಲಿ 6,00,000 ಕಿಲೋಮೀಟರ್‌ಗಳಷ್ಟು ಆಪ್ಟಿಕಲ್ ಫೈಬರ್‌ಗಳನ್ನು ಹಾಕಲಾಗಿದ್ದು, ಇದರಿಂದ ಪ್ರತಿ ಗ್ರಾಮಕ್ಕೂ ಇಂಟರ್ನೆಟ್ ಸೌಲಭ್ಯ ದೊರೆಯುತ್ತದೆ. ದೇಶದಲ್ಲಿ ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆ ಹದಿಮೂರು ಪಟ್ಟು ಹೆಚ್ಚಾಗಿದೆ ಮತ್ತು ಇಂಟರ್ನೆಟ್ ಸಂಪರ್ಕಗಳು ಮೂರು ಪಟ್ಟು ಹೆಚ್ಚಾಗಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.
ಭಾರತವು ವಿಶ್ವದ 2ನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿ ಮಾರ್ಪಟ್ಟಿದೆ.ಇದು ವಿಶ್ವದ ಅತಿದೊಡ್ಡ ಮಹತ್ವಾಕಾಂಕ್ಷೆಯ ವರ್ಗದ ರಚನೆಗೆ ಕಾರಣವಾಗಿದೆ. ಭಾರತದ ಜನರು ಉತ್ತಮ ಉತ್ಪನ್ನಗಳು, ಉತ್ತಮ ಸೇವೆಗಳು ಮತ್ತು ಉತ್ತಮ ಮೂಲಸೌಕರ್ಯಗಳನ್ನು ಬಯಸುತ್ತಾರೆ. ಭಾರತೀಯ ನಾಗರಿಕರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಭಾರತ ಸದಾ ನಿರತವಾಗಿರಲಿದೆ" ಎಂದರು.