ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ, ಯಾವುದೇ ಸಮುದಾಯವನ್ನು ಅವಮಾನಿಸಿಲ್ಲ | JANATA NEWS

ಬೆಂಗಳೂರು : ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಸಾರ್ವಜನಿಕರಿಂದ ಅಹವಾಲು ಕೇಳುವಾಗಲೂ ಜಾತಿ ಕೇಳಿಲ್ಲ. ನಾನು ಯಾವತ್ತೂ ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯವನ್ನು ನೀಡಿಲ್ಲ. ಯಾವುದೇ ಸಮುದಾಯಕ್ಕೂ ನಾನು ಅವಮಾನ ಮಾಡಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.
ಬಿಜೆಪಿ ನಾಯಕರ ಟೀಕೆಯನ್ನು ನಾನು ಗಮನಿಸಿದ್ದೇನೆ. ನಾನು ಸಿಟಿ ರವಿ ವಿಚಾರಕ್ಕೆ ಹೋಗಿಲ್ಲ, ಆದರೂ ನನ್ನ ಬಗ್ಗೆ ಟೀಕೆ ಮಾಡ್ತಾರೆ. ಸಿಟಿ ರವಿ ಇತಿಹಾಸ ಏನು ಅಂತ ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ನಾನು ಯಾವತ್ತೂ ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಿದನವಲ್ಲ. ಯಾವುದೇ ಸಮುದಾಯಕ್ಕೂ ನಾನು ಅವಮಾನ ಮಾಡಿಲ್ಲ. ಈ ಬಗ್ಗೆ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಬ್ರಾಹ್ಮಣ ಮಹಾಸಭಾಕ್ಕೆ ನಾನು ಮನವಿ ಮಾಡುತ್ತೇನೆ. ಬ್ರಾಹ್ಮಣ ಸಮುದಾಯದ ವಿರುದ್ಧ ನಾನು ಹೇಳಿಕೆ ಕೊಟ್ಟಿಲ್ಲ. ಬ್ರಾಹ್ಮಣ ಸಮಾಜಕ್ಕೆ ಅವಹೇಳನ ಮಾಡಿಲ್ಲ ಎಂದರು. ನಾನು ಸಿಎಂ ಆಗಿದ್ದಾಗಲೇ ಬ್ರಾಹ್ಮಣ ಮಹಾಸಭಾಗೆ ಬನಶಂಕರಿ ಬಳಿ ಜಾಗ ಕೊಟ್ಟಿರುವುದಾಗಿದೆ. ಎರಡನೇ ಬಾರಿ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು. ಯಾವುದೇ ಸಮಾಜದಿಂದಾದರೂ ಸಿಎಂ ಆಗಲಿ. ಅದಕ್ಕೆ ನನ್ನ ವಿರೋಧ ಇಲ್ಲ. ನಾನು ಸಹ ಇದಕ್ಕೆ ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಠ್ಯ ಪುಸ್ತಕ ತಿರುಚಿದರು. ಟಿಪ್ಪು ಬಗ್ಗೆ ಪ್ರಸ್ತಾಪ ಮಾಡಿದರು. ಕಲುಷಿತ ವಾತಾವರಣ ನಿರ್ಮಾಣ ಮಾಡಿದರು. ಆ ಕಾರಣಕ್ಕಾಗಿ ನಾನು ಕೆಲ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಅಂತ ಹೇಳಿದೆ. ಶೃಂಗೇರಿ ಚಂದ್ರಮೌಳೇಶ್ವರ ದೇವಾಲಯ ಒಡೆದವರು ಯಾರು..?, ಗಾಂಧೀಜಿ ಕೊಂದವರು ಯಾರು..?. ಪೇಶ್ವೆ ವಂಶದವರು ಅಂತ ಹೇಳಿದೆ. ಇಂತಹವರನ್ನು ಸಿಎಂ ಮಾಡುವ ಹುನ್ನಾರ ನಡೆದಿದೆ ಅಂತ ಹೇಳಿದೆ. ನಮ್ಮ ಬ್ರಾಹ್ಮಣ ಸಮಾಜ ಸರ್ವೇಜನೋ ಸುಖಿನೋ ಭವಂತು ಅಂತಾರೆ. ಆದರೆ ಪೇಶ್ವೆ ಬ್ರಾಹ್ಮಣರು ನಾಶೋ ಬಹುಂತು ಅಂತಾರೆ. ಇದು ಕುವೆಂಪು ಹೇಳಿದಂತೆ ಸರ್ವ ಜನಾಂಗದ ತೋಟ ನಮ್ಮ ರಾಜ್ಯ ಎಂದರು.