ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್ನಲ್ಲಿರುವ 10 ಜನರಲ್ಲಿ ನಾನೂ ಒಬ್ಬ | JANATA NEWS

ತುಮಕೂರು : ಕಾಂಗ್ರೆಸ್ ನಲ್ಲಿ 10 ಜನ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ನಾನೂ ಒಬ್ಬ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಮತ್ತೊಮ್ಮೆ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ.
ಜಿಲ್ಲೆಯ ಮಧುಗಿರಿಯಲ್ಲಿ ಇಂದು ಮಾತಾಡಿದ ಅವರು, ತಮ್ಮ ಪಕ್ಷದಲ್ಲಿ, ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವ ಪರಿಪಾಠ ಇಲ್ಲ, ಅವತ್ತಿನ ಸಂದರ್ಭಕ್ಕೆ ಯಾರು ಹೆಚ್ಚು ಸೂಕ್ತ ಅನಿಸುತ್ತಾರೋ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಪಾಸಿಟಿವ್ ವೈಬ್ ವ್ಯಕ್ತವಾಗುತ್ತಿವೆ, ಎಲ್ಲ ಸಮೀಕ್ಷೆಗಳಲ್ಲಿ ತಮ್ಮ ಪಕ್ಷವೇ ಮುಂದಿದೆ, 113ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರೋದು ಖಚಿತ ಎಂದು ಹೇಳಿದರು.
ನಿಮಗೆ ಸಿಎಂ ಆಗುವ ಆಸೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಯಾಕೆ ಮಾಡುತ್ತಿದ್ದೇನೆ ಹೇಳಿ? ಅಧಿಕಾರಕ್ಕೆ ಬರಬೇಕು ಎಂದು ಅಲ್ಲವೇ? ಮುಖ್ಯಮಂತ್ರಿ ಆಗಬೇಕು ಎನ್ನುವುದು ಎಲ್ಲರಿಗೂ ಆಸೆ ಇರುತ್ತದೆ. ನಮ್ಮ ಪಕ್ಷದಲ್ಲಿ ಒಂದು ಹತ್ತು ಜನರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಅದರಲ್ಲಿ ನಾನೂ ಒಬ್ಬ ಎಂದು ಹೇಳಿದ್ದಾರೆ.