ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್: ಸಿದ್ದರಾಮಯ್ಯ | JANATA NEWS

ಬೆಂಗಳೂರು : ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟೀಕಾ ಪ್ರಹಾರ ನಡೆಸಿದರು.
ಬಜೆಟ್ ಮಂಡನೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಇನ್ನು ಎರಡು ತಿಂಗಳಲ್ಲಿ ಚುನಾವಣೆ ಮುಗಿಯುತ್ತದೆ. ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್. ಈ ಬಾರಿ ಬಜೆಟ್ ಗಾತ್ರ 3 ಲಕ್ಷ ರೂ. ದಾಟಿದೆ.
ಕಳೆದ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳ ಪೈಕಿ 57 ಅನ್ನು ಸರ್ಕಾರ ಅನುಷ್ಠಾನಗೊಳಿಸಲಿಲ್ಲ. ಹಾಗೆಯೇ, 2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿತ್ತು. ಆದರೆ ಅವುಗಳಲ್ಲಿ ಶೇಕಡ 90 ರಷ್ಟು ಭರವಸೆಗಳನ್ನು ಈಡೇರಿಸಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಪುನಃ ಸುಳ್ಳು ಭರವಸೆಗಳ ಬಜೆಟ್ ಮಂಡಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸರ್ವಜ್ಞ ವಚನದ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಜನರನ್ನು ಕನಸಿನ ಲೋಕದಲ್ಲಿ ತೇಲಾಡಿಸಿದೆ ಹೊರತು ಏನೂ ಮಾಡಿಲ್ಲ ಎಂದರು. ಸಾಲ 5,64,896 ಕೋಟಿ ಸಾಲ ಆಗಿದೆ ಎಂದಿದ್ದಾರೆ, 2,47,000 ಕೋಟಿ ನನ್ನ ಕೊನೆಯ ಅವಧಿಯಲ್ಲಿ ಇತ್ತು. 3,22,000 ಕೋಟಿ ಸಾಲ ಹೆಚ್ಚಾಗಿದೆ. 41916 ಕೋಟಿ ಸಮ್ಮಿಶ್ರ ಸರ್ಕಾರದಲ್ಲಿ ಸಾಲ ಆದರೆ 2,54, 760 ಕೋಟಿ ಬಿಜೆಪಿ ಅವಧಿ ಸಾಲ ಮಾಡಲಾಗಿದೆ. ನಮ್ಮ ಐದು ವರ್ಷದ ಅವಧಿಯಲ್ಲಿ 1,16,512 ಕೋಟಿ ಸಾಲ ಆಗಿತ್ತು. ಈ ಮೂಲಕ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಯದ್ವಾ ತದ್ವಾ ಸಾಲ ಮಾಡಿ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು. ಹೀಗಾದರೆ ಇದನ್ನು ಅಭಿವೃದ್ಧಿ ಪರ ಬಜೆಟ್ ಎಂದು ಹೇಗೆ ಕರೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ಒಟ್ಟಾರೆಯಾಗಿ ಇದೊಂದು ನಿರಾಶಾದಾಯಕ, ಚುನಾವಣಾ ಬಜೆಟ್ ಆಗಿದೆ. ಬಜೆಟ್ ನಲ್ಲಿ ಬದ್ಧ ವೆಚ್ಚಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಬದ್ಧ ವೆಚ್ಚ ಕಡಿಮೆ ಮಾಡಲು ಯಾವ ಪ್ರಯತ್ನ ಮಾಡಿಲ್ಲ. ಅನಗತ್ಯ ವೆಚ್ಚ ತಡೆಯಲು ಕ್ರಮ ಕೈಗೊಂಡಿಲ್ಲ. ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ, ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.