ರೂಪಾ-ಸಿಂಧೂರಿ ಇಬ್ಬರನ್ನೂ ವರ್ಗಾವಣೆ ಮಾಡಿದ ಸರ್ಕಾರ | JANATA NEWS

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬೀದಿ ಜಗಳ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಇಬ್ಬರು ಅಧಿಕಾರಿಗಳನ್ನೂ ರಾಜ್ಯ ಸರ್ಕಾರ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.
ಇಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹಾಗೂ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಡಿ. ರೂಪಾ ಮೌದ್ಗಿಲ್ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ.
ಸರ್ವೇ ಮತ್ತು ಭೂ ದಾಖಲೆ ಇಲಾಖೆಯ ಆಯುಕ್ತರಾಗಿದ್ದ ಮೌನೀಶ್ ಮೌದ್ಗಿಲ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ರೋಹಿಣಿ ಸಿಂಧೂರಿ ನಿಭಾಯಿಸುತ್ತಿದ್ದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಸ್ಥಾನಕ್ಕೆ ಬಸವರಾಜೇಂದ್ರ ಹೆಚ್. (ಐಎಎಸ್) ಅವರನ್ನು ವರ್ಗಾವಣೆ ಮಾಡಲಾಗಿದೆ. ಡಿ.ರೂಪಾ ನಿಭಾಯಿಸುತ್ತಿದ್ದ ಕರಕುಶಲ ಅಭಿವೃದ್ಧಿ ನಿಗಮದ MD ಸ್ಥಾನಕ್ಕೆ ಭಾರತಿ ಡಿ (ಐಎಎಸ್) ಅವರನ್ನು ನೇಮಿಸಲಾಗಿದೆ.
ಕಳೆದ ಎರಡು ದಿನಗಳಿಂದ ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಅವರ ನಡುವಿನ ಕಿತ್ತಾಟ ತಾರಕಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ಒತ್ತಡ, ಮುಜುಗರಕ್ಕೆ ಒಳಗಾದ ಸರ್ಕಾರ ಇಬ್ಬರಿಗೂ ಕರೆಸಿ ಸ್ಪಷ್ಟನೆ ಪಡೆದು, ಬಹಿರಂಗ ಹೇಳಿಕೆ ನೀಡದಂತೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ, ಅಖಿಲ ಭಾರತ ಸೇವೆಗಳ ನಿಯಮಗಳಿಗೆ ಬದ್ಧರಾಗಿರುವಂತೆ ಖಡಕ್ ಎಚ್ಚರಿಕೆ ಕೊಟ್ಟಿತ್ತು. ಅಲ್ಲದೆ ಇಬ್ಬರೂ ಆರೋಪ ಮತ್ತು ಪ್ರತ್ಯಾರೋಪಗಳನ್ನು ಸಾರ್ವಜನಿಕವಾಗಿ ಮಾಡುವುದನ್ನು ತಡೆಯಲು ನಿರ್ದೇಶನ ನೀಡಿದೆ.