ಧಮ್, ತಾಕತ್ ಇದ್ದರೆ ನನ್ನನ್ನು ಹೊಡೆದು ಹಾಕಲಿ ನೋಡೋಣ | JANATA NEWS

ಬೆಂಗಳೂರು : ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದು ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಈ ಮೂಲಕ ಟಿಪ್ಪು ಸುಲ್ತಾನ್ ನನ್ನು ಮೇಲೆ ಕಳಿಸಿದಂತೆ ಸಿದ್ದರಾಮಯ್ಯ ಅವರನ್ನು ಮೇಲೆ ಕಳಿಸಿ ಎಂಬ ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜಂಟಿ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ, ಸಚಿವ ಅಶ್ವಥ್ ನಾರಾಯಣ ಹೇಳಿಕೆ ಗುಡುಗಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದರು. ಯಾವ ಧರ್ಮವೂ ಕೂಡ ಕೊಲೆ ಮಾಡೋಕೆ ಹೇಳುವುದಿಲ್ಲ, ಯಾವ ಧರ್ಮವೂ ಕೂಡ ಹೊಡೆಯೋಕೆ, ಬಡಿಯೋಕೆ ಹೇಳುವುದಿಲ್ಲ, ಇದು ಬೌದ್ಧಿಕ ದಿವಾಳಿತನ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಶ್ವತ್ ನಾರಾಯಣ ಅವರು ಆಡು ಭಾಷೆಯಲ್ಲಿ ಹೇಳಿದ್ದಾರೆ. ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ ಎಂದರು.
ಇಂಥಾ ಬೆದರಿಕೆಗಳಿಗೆ ಹೆದರಿಕೊಂಡು ನನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವವನು ನಾನಲ್ಲ. ನಾನು ನನ್ನ ಜೀವನದ ಕೊನೆಯವರೆಗೆ ಸಮಾಜದ ದುರ್ಬಲುರು, ಅವಕಾಶ ವಂಚಿತರು, ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದ ಜನರ ಪರವಾಗಿಯೇ ಇರುತ್ತೇನೆ. ಧಮ್, ತಾಕತ್ ಇದ್ದರೆ ಹೊಡೆದುಹಾಕಲಿ ನೋಡೋಣ ಎಂದು ಕಿಡಿಕಾರಿದರು.