ಅರ್ಕಾವತಿ ಹಗರಣದಲ್ಲಿದ್ದವರು ಕೆಲವೇ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್ | JANATA NEWS

ರಾಮಚೂರು, : ಅರ್ಕಾವತಿ ಹಗರಣಕ್ಕೆ ಸಂಬಂಧಿಸಿ ಜಸ್ಟಿಸ್ ಕೆಂಪಣ್ಣನವರ ಆಯೋಗದ ವರದಿಯನ್ನು ನಮ್ಮ ಮುಖ್ಯಮಂತ್ರಿಯವರು ಸದನದಲ್ಲಿ ಮಂಡಿಸಿದ್ದಾರೆ. ಲೋಕಾಯುಕ್ತಕ್ಕೆ ಕೊಟ್ಟು ಸಂಪೂರ್ಣ ತನಿಖೆ ಮಾಡಿಸಲಾಗುತ್ತಿದೆ.
ಲಿಂಗಸೂಗೂರಿನಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದ ವೇಳೆ ಮಾತನಾಡಿ, ಪ್ರಕರಣದಲ್ಲಿ ಭಾಗಿಯಾದ ನಾಯಕರ ವಿರುದ್ಧ ಕ್ರಮ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಕರ್ನಾಟಕದಲ್ಲಿ ಅಭಿವೃದ್ಧಿಯ ಹರಿಹಾರ ಯಡಿಯೂರಪ್ಪನವರಿಗೆ ಬೇಡಿಕೆ ಹಾಗೂ ಜನಬೆಂಬಲ ಇದೆ. ಸಿದ್ದರಾಮಯ್ಯನಿಗೆ ಇಲ್ಲ. 5 ವರ್ಷ ಆಡಳಿತ ಮಾಡಿದ ಸಿದ್ದರಾಮಯ್ಯನ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅವಧಿಯಲ್ಲಿ ಅಧಿಕಾರಿಗಳ ಆತ್ಮಹತ್ಯೆ ನಿರಂತರವಾಗಿತ್ತು. ಸಿದ್ದರಾಮಯ್ಯನ ಕಾಲದಲ್ಲಿ ರೌಡಿರಾಜ್ಯ ಇತ್ತು ಎಂದು ಆರೋಪಿಸಿದರು.
24 ಜನ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಹಿಂದೂ- ಮುಸ್ಲಿಮರ ನಡುವೆ ಕಲಹಕ್ಕಾಗಿ ಟಿಪ್ಪು ಜಯಂತಿ ಆರಂಭಿಸಿದರು. ಗಲಭೆಗಳನ್ನು ಸೃಷ್ಟಿಸಿದರು. ಹಿಂದುಳಿದ ವರ್ಗಗಳನ್ನು, ಕುರುಬರನ್ನು ತುಳಿದರು.
ತಾವು ಸಿಕ್ಕಿ ಬೀಳುತ್ತೇವೆ ಎಂದು ಲೋಕಾಯುಕ್ತವನ್ನು ಮುಚ್ಚಿಸಿದ್ದರು. ಹಲ್ಲಿಲ್ಲದ ಎಸಿಬಿಯನ್ನು ಹುಟ್ಟುಹಾಕಿದರು. ಕೆಂಪಣ್ಣ ವರದಿಯನ್ನು ಮುಚ್ಚಿಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದರು. ಈಗ ಆ ವರದಿ ದಾಖಲಾತಿಗಳನ್ನು ಇಟ್ಟುಕೊಂಡು ತನಿಖೆ ಮಾಡಿಸುತ್ತೇವೆ. ಹಗರಣದಲ್ಲಿದ್ದವರು ಜೈಲಿಗೆ ಹೋಗುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಲಿದ್ದಾರೆ. ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ಮತ್ತೆ ಬಿಜೆಪಿ ಆಡಳಿತ ಬರಲಿದೆ ಎಂದು ಹುಲಿಯಾ ಕಾಡಿಗೆ ಹೋಗಲಿದೆ. ಬಂಡೆ ಒಡೆದು ಹೋಗಲಿದೆ. ಬಿಜೆಪಿಯ ಕಮಲ ಅರಳಲಿದೆ. ರಾಯಚೂರು ಕಲ್ಯಾಣ ಕರ್ನಾಟಕದ ಅನ್ನದ ಬಟ್ಟಲು. ಚಿನ್ನದ ನಾಡಿದು. ಆದರೆ, 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಚಿನ್ನದ ಬಟ್ಟಲನ್ನು ಕಬ್ಬಿಣದ, ಕಲ್ಲಿನ ಬಟ್ಟಲಾಗಿ ಮಾಡಿದೆ. ಇಲ್ಲಿ ಅಭಿವೃದ್ಧಿ ಮಾಡದೆ ಲೂಟಿ ಹೊಡೆಯುವ ಕಾರ್ಯ ಮಾಡಿದೆ ಎಂದು ಆರೋಪಿಸಿದರು.
ಬಾದಾಮಿಯಿಂದ ಸಿದ್ದರಾಮಯ್ಯನನ್ನು ಓಡಿಸಿದ್ದಾರೆ. ವರುಣಾಕ್ಕೆ ಬರಲು ಬಿಡುವುದಿಲ್ಲ. ಕೋಲಾರದಲ್ಲಿ ಜಾಗ ಇಲ್ಲ. ಮಾಜಿ ಮುಖ್ಯಮಂತ್ರಿಗೆ ಸೀಟೇ ಇಲ್ಲ ಎಂಬ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್‍ನಲ್ಲಿ ಅವರು ಅಲೆಮಾರಿಯಾಗಿದ್ದಾರೆ ಎಂದು ಟೀಕಿಸಿದರು.