ಎಂಎಲ್ಸಿ ಭೋಜೇಗೌಡರ ಕಾರ್ ನಂಬರ್ ಪ್ಲೇಟ್ ನಕಲು ಮಾಡಿ ಮಾರಾಟಕ್ಕೆ ಯತ್ನ; ಇಬ್ಬರು ಅರೆಸ್ಟ್ | JANATA NEWS

ಬೆಂಗಳೂರು : ವಿಧಾನಪರಿಷತ್ ಸದಸ್ಯರ ಕಾರಿನ ನಂಬರ್ ಪ್ಲೇಟ್ ಬಳಸಿ ವಂಚಕರು ಕದ್ದ ಕಾರುಗಳನ್ನು ಮಾರಾಟ ಮಾಡಲು ಮಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಡಿಎಸ್ ಎಂಎಲ್‍ಸಿ ಭೋಜೇಗೌಡರ ಕಾರಿನ ನಂಬರನ್ನು ಬಳಸಿ ಕದ್ದ ಕಾರನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿ ನಡೆದಿದೆ.
ವಿಧಾನಪರಿಷತ್ ಸದಸ್ಯ ಬೋಜೇಗೌಡ ಅವರ ಕಾರಿನ ನಂಬರ್ ಅನ್ನು ಮತ್ತೊಂದು ಕಾರಿಗೆ ಅಳವಡಿಸಿ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಐಕಾರ್ ಸ್ಟುಡಿಯೋ ಶೋ ರೂಂ ಮಾಲೀಕ ಇಮ್ರಾನ್, ಮೈಸೂರು ಮೂಲದ ಶಾಬಾಜ್ ಖಾನ್ (31), ಅಟ್ಟೂರು ಲೇಔಟ್ ನಿವಾಸಿ ಮಂಜುನಾಥ್ (45) ಬಂಧಿತರು. ಆರೋಪಿಗಳು ನಕಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿ ಕಾರುಗಳನ್ನು ಮಾರಾಟ ಮಾಡುವ ವಂಚನೆಯನ್ನು ಹಲವು ವರ್ಷಗಳಿಂದ ನಡೆಸುತ್ತಿರುವ ಶಂಕೆಯಿದೆ. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಪಕ್ಕದಲ್ಲಿರುವ ಐ ಕಾರ್ಸ್ ಸ್ಟುಡಿಯೋದಲ್ಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಕಾರ್ ನಿಲ್ಲಿಸಲಾಗಿತ್ತು. ಇದನ್ನು ಅವರ ಆಪ್ತ ಸಹಾಯಕ ಗಮನಿಸಿ ತಕ್ಷಣ ಶೋರೂಂ ಒಳಗೆ ತೆರಳಿ ವಿಚಾರಿಸಿದ್ದರು. ಭೋಜೇಗೌಡರ ಆಪ್ತ ಸಹಾಯಕ ಕೂಡಲೇ ಕಾರ್ ದಾಖಲಾತಿಗಳನ್ನು ಪರಿಶೀಲಿಸಿದ್ದು, ಕಾರ್ ಎಂಎಲ್ಸಿ ಭೋಜೇಗೌಡರ ಹೆಸರಿನಲ್ಲಿರುವುದು ಗೊತ್ತಾಗಿದೆ. ಕೂಡಲೇ ಕರೆ ಮಾಡಿ, ಶೋರೋಂನಲ್ಲಿ ನಿಮ್ಮ ಕಾರ್ ಅದೇ ನಂಬರ್ನಲ್ಲಿ ಮತ್ತೊಂದು ಕಾರ್ ಇರುವುದಾಗಿ ಎಲ್ಲಾ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಭೋಜೇಗೌಡರ ಆಪ್ತ ಸಹಾಯಕ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.