ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ನಾಳೆಯಿಂದ ಟೋಲ್ ಸಂಗ್ರಹ ಆರಂಭ | JANATA NEWS

ಬೆಂಗಳೂರು : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಮೊದಲ ಹಂತದ ಟೋಲ್ ಕೇಂದ್ರಗಳು ಸೋಮವಾರದಿಂದ ಕಾರ್ಯಾರಂಭ ಮಾಡಲಿದ್ದು, ನಾಳೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಲಿದೆ.
ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹ ಅನ್ವಯವಾಗಲಿದೆ. ಕಾರು/ಜೀಪು/ವ್ಯಾನ್ಗಳ ಏಕಮುಖ ಸಂಚಾರಕ್ಕೆ ರೂ. 135/- ಅದೇ ದಿನ ಮರು ಸಂಚಾರಕ್ಕೆ ರೂ. 205/- ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 4525/-, ಬಸ್ ಅಥವಾ ಟ್ರಕ್ ಏಕಮುಖ ಸಂಚಾರಕ್ಕೆ ರೂ. 460/- ಅದೇ ದಿನ ಮರು ಸಂಚಾರಕ್ಕೆ ರೂ. 690/- ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 15325/-, ಲಘು ವಾಣಿಜ್ಯ ವಾಹನಗಳು, ಮೂರು ಅಕ್ಸೆಲ್ ವಾಣಿಜ್ಯ ವಾಹನಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳಿಗೆ ವಿವಿಧ ದರಗಳನ್ನು ನಿಗದಿಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್ ನಿರ್ಮಿಸಲಾಗಿದ್ದು, ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಇಲ್ಲಿ ಟೋಲ್ ಶುಲ್ಕ ಕಟ್ಟಿ ಪ್ರಯಾಣಿಸಬೇಕು. ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಬಳಿ ಇರುವ ಟೋಲ್ನಲ್ಲಿ ಮೈಸೂರು ಕಡೆಯಿಂದ ಪ್ರಯಾಣಿಸುವವರು ಟೋಲ್ ಕಟ್ಟಿ ಬೆಂಗಳೂರಿನತ್ತ ಬರಬಹುದು. ಈ ಕೇಂದ್ರಗಳು ತಲಾ 11 ಗೇಟುಗಳನ್ನು ಒಳಗೊಂಡಿದ್ದು, ಫ್ಯಾಶ್ ಟ್ಯಾಗ್ ಸಹಿತ ವಿವಿಧ ಸೌಲಭ್ಯಗಳನ್ನು ಒಳಗೊಳ್ಳಲಿವೆ.
ಈ ಬಗ್ಗೆ ಯಾವುದೇ ದೂರುಗಳಿಗೆ 1033 ದೂರವಾಣಿಯನ್ನು ಹಾಗೂ ವಿಚಾರಣೆ ನೀಡುವುದಕ್ಕೆ ಯೋಜನಾ ನಿರ್ದೇಶಕರಿಗೆ ದೂರು ನೀಡುವಂತೆ ಪ್ರಕಟಣೆಯಲ್ಲಿ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.