ಆಸ್ತಿಗಾಗಿ ತಂದೆ ಕೊಲೆಗೆ ಸಪಾರಿ ನೀಡಿದ್ದ ಮಗ ಸೇರಿ ಮೂವರ ಬಂಧನ | JANATA NEWS

ಬೆಂಗಳೂರು : ತಂದೆಯ ಕೊಲೆಗೆ ಮಗನೇ 1 ಕೋಟಿ ರೂ. ಸುಪಾರಿ ಕೊಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಮಗ ಮೂವರು ಆರೋಪಿಗಳನ್ನ ಮಾರತ್ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
70 ವರ್ಷದ ನಾರಾಯಣಸ್ವಾಮಿ ಎಂಬುವರ ಕೊಲೆಗೆ ಸುಪಾರಿ ನೀಡಿದ ಪುತ್ರ ಮಣಿಕಂಠ, ಸುಪಾರಿ ಪಡೆದ ರೌಡಿಶೀಟರ್ ಶಿವಕುಮಾರ್ ಹಾಗೂ ನವೀನ್ ಎಂಬುವರನ್ನ ಬಂಧಿಸಲಾಗಿದೆ.
ಪುತ್ರ, ತನ್ನ ತಂದೆ ನಾರಾಯಣಸ್ವಾಮಿಯ (70) ಕೊಲೆ ಮಾಡಿಸಲು 1 ಕೋಟಿ ರೂ. ಸುಪಾರಿ ನೀಡಿದ್ದ. ಆದರೆ ಅದರಲ್ಲಿ ವಿಚಿತ್ರ ವಿಚಾರ ಏನೆಂದರೆ ಕೇವಲ ಒಂದು ಲಕ್ಷ ಅಡ್ವಾನ್ಸ್ ಪಡೆದ ಹಂತಕರು ಅಪಾರ್ಟ್ಮೆಂಟ್ನ ಪಾರ್ಕಿಂಗ್ ಲಾಟ್ನಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುತ್ರ ಮಣಿಕಂಠನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ನೀಡಿದ ಸಂಗತಿ ಬೆಳಕಿಗೆ ಬಂದಿತ್ತು. ಅಪ್ಪ-ಮಗನ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ತಂದೆ ಮುಗಿಸಲು 1 ಕೋಟಿ ಸುಪಾರಿ ನೀಡಿ ಮಾತುಕತೆ ನಡೆಸಿ ಮುಂಗಡವಾಗಿ 1 ಲಕ್ಷ ನೀಡಿರುವುದು ಗೊತ್ತಾಗಿದೆ.
ಸುಪುತ್ರ ಮಣಿಕಂಠ 2013ರಲ್ಲಿ ತನ್ನ ಪತ್ನಿಯನ್ನ ಕೊಲೆ ಮಾಡಿದ್ದ. ಕಳೆದ ಐದು ತಿಂಗಳ ಹಿಂದೆ ಈತನ ವಿರುದ್ಧ ಮಾರತ್ ಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಜಾಮೀನು ಪಡೆದು ಹೊರಬಂದು ಎರಡನೇ ವಿವಾಹವಾಗಿ ಒಂದು ಹೆಣ್ಣು ಮಗುವಿದೆ.ಹೀಗಿದ್ದರೂ ಮತ್ತೊಬ್ಬ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಎರಡನೇ ಪತ್ನಿ ಮಣಿಕಂಠನಿಂದ ದೂರವಾಗಿ ವಿಚ್ಚೇದನದ ಮಾತುಕತೆ ನಡೆಯುತಿತ್ತು.
ಇದನ್ನು ತಿಳಿದ ನಾರಾಯಣಸ್ವಾಮಿ ತನ್ನ ಹೆಸರಿನಲ್ಲಿದ್ದ ಪ್ಲ್ಯಾಟ್ ನ್ನ ಸೊಸೆಗೆ ರಿಜಿಸ್ಟರ್ ಮಾಡಲು ಮುಂದಾಗಿದ್ದ. ತಂದೆ ಕೊಂದರೆ ಆಸ್ತಿ ತನ್ನ ಹೆಸರಿಗೆ ಇರುತ್ತೆ ಸುಖವಾಗಿ ಇರಬಹುದು ಎಂದು ಪ್ಲಾನ್ ಮಾಡಿದ ಮಣಿಕಂಠ ತಂದೆಯ ಹತ್ಯೆಗೆ ಸುಪಾರಿ ನೀಡಿದ್ದ.