ಸರ್ಕಾರಿ ನೌಕರರ ಮುಷ್ಕರ ಅಂತ್ಯ: ಶೇ.17ರಷ್ಟು ವೇತನ ಹೆಚ್ಚಳ ಮಧ್ಯಂತರ ಆದೇಶಕ್ಕೆ ಒಪ್ಪಿಗೆ! | JANATA NEWS

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ರಾಜ್ಯ ಸರ್ಕಾರ ಶೇಕಡಾ 17ರಷ್ಟು ವೇತನ ಹೆಚ್ಚಿಸಿದೆ. ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದನ್ನು ಒಪ್ಪಿಕೊಂಡಿರುವ ಸರ್ಕಾರಿ ನೌಕರರು ಅಂತಿಮವಾಗಿ ಮುಷ್ಕರವನ್ನು ಬುಧವಾರ ವಾಪಸ್ ಪಡೆದುಕೊಂಡಿದ್ದಾರೆ.
ಶೇ.17ರಷ್ಟು ವೇತನ ಹೆಚ್ಚಳ ಮಾಡಿರುವುದಾಗಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ವಿಧಾನಸೌಧದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ, ಆದೇಶವನ್ನು ಪಡೆದುಕೊಂಡರು.
ನಂತರ ಕಬ್ಬನ್ ಪಾರ್ಕ್ ನಲ್ಲಿರುವ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಮತಾನಾಡಿದ ಅವರು, ನೌಕರರ ವೇತನವನ್ನು ಶೇ 17 ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶವನ್ನು ಪಡೆದಿದ್ದೇವೆ. ನಮ್ಮ ಬೇಡಿಕೆಗೆ ಈಡೇರಿಕೆಗೆ ಮುಷ್ಕರ ನಡೆಸಲಾಗಿತ್ತು. ಸರ್ಕಾರದ ಆದೇಶ ಆಗಿದೆ. ಈ ಮೂಲಕ ನಮ್ಮ ಹೋರಾಟ ಸಫಲವಾಗಿದೆ. ತಮ್ಮ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಈ ಆದೇಶ ಮುಂದಿನ ತಿಂಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ವೇತನ ಹೆಚ್ಚಳದ ನೂತನ ಅದೇಶದಿಂದ ಸದ್ಯ ಸರ್ಕಾರದ ಬೊಕ್ಕಸಕ್ಕೆ 6,000 ಕೋಟಿ ರೂ.ಗಳನ್ನು ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ಬಾರಿಯ ಬಜೆಟ್ನಲ್ಲಿ ಸರ್ಕಾರಿ ನೌಕರರ ಹೆಚ್ಚುವರಿ ವೇತನಕ್ಕೆ 6 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ನೂತನ ಆದೇಶದಿಂದ ಸರ್ಕಾರ ವಾರ್ಷಿಕ 10,800 ಕೋಟಿ ರೂ. ಮೀಸಲಿಡಬೇಕಾಗಿದೆ. ಇದು ಸರ್ಕಾರದ ಅಂದಾಜಿಗಿಂತ 4,800 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.