ತಾಯಿ ತೀರಿದ ಅರಿವಿಲ್ಲದೇ ತಾಯಿಯ ಶವದೊಂದಿಗೆ 2 ದಿನ ಕಳೆದ ಬಾಲಕ! | JANATA NEWS

ಬೆಂಗಳೂರು : ತಾಯಿ ಮೃತಪಟ್ಟಿದ್ದಾಳೆ ಎಂಬುದನ್ನು ಅರಿಯದ 11 ವರ್ಷದ ಬಾಲಕ ಮೃತದೇಹದೊಂದಿಗೆ ಎರಡು ದಿನ ಕಳೆದಿರುವ ಘಟನೆ ನಗರದಲ್ಲಿ ನಡೆದಿದೆ.
ಆರ್.ಟಿ.ನಗರ ಠಾಣಾ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿ ಘಟನೆ ನಡೆದಿದೆ. ಅಣ್ಣಮ್ಮ (44) ಎಂಬಾಕೆ ಸಾವನ್ನಪ್ಪಿ ಎರಡು ದಿನವಾದರು ಮಗ ತಾಯಿಯ ಶವದೊಂದಿಗೆ ದಿನ ಕಳೆದಿದ್ದಾನೆ.
ಅಣ್ಣಮ್ಮ ಫೆಬ್ರವರಿ 26 ರಂದು ಮನೆಯಲ್ಲಿ ಮಲಗಿದ್ದಾಗಲೇ ಸಾವನ್ನಪ್ಪಿದ್ದು, ಲೋ ಬಿಪಿ ಮತ್ತು ಶುಗರ್ ನಿಂದಾಗಿ ಮಹಿಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಅಮ್ಮ ಅಡುಗೆ ಮಾಡಿಲ್ಲ ಅಂತಾ ಊಟ ಮಾಡಿಕೊಂಡು ಬಂದು ಮತ್ತೆ ಅಮ್ಮನ ಮೃತದೇಹದ ಪಕ್ಕದಲ್ಲೇ ಮಲಗಿಕೊಳ್ಳುತ್ತಿದ್ದನಂತೆ. ರಾತ್ರಿಯೆಲ್ಲಾ ತಾಯಿಯ ಜೊತೆಯಲ್ಲೇ ಮಲಗಿ ಕಾಲ ಕಳೆಯುತ್ತಿದ್ದ.
ಫೆ.28 ರಂದು ಮೃತದೇಹದಿಂದ ದುರ್ವಾಸನೆ ಹೊರಬರಲು ಶುರುವಾಗಿದೆ. ಈ ಬಗ್ಗೆ ಬಾಲಕ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ. ಪರಿಶೀಲಿಸಿದಾಗ ಮಹಿಳೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಆರ್.ಟಿ.ನಗರ ಪೊಲೀಸರು ಸ್ಥಳಕ್ಕಾಗಿಮಿಸಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.