ಗ್ಯಾಸ್ ಸಿಲಿಂಡರ್ ಸ್ಫೋಟ: ಒಂದೇ ಕುಟುಂಬದ 13 ಮಂದಿಗೆ ಗಾಯ | JANATA NEWS

ಬೆಂಗಳೂರು : ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿ ಏಕಾಏಕಿ ಸಿಲಿಂಡರ್ ಸ್ಫೋಟದ ಪರಿಣಾಮ ಇಡೀ ಮನೆಯಲ್ಲಿದ್ದ 13 ಜನ ಗಾಯಗೊಂಡ ಘಟನೆ ನಡೆದಿದೆ.
ಘಟನೆಯಲ್ಲಿ ಅಜ್ಮಲ್ (46), ನಜೀಮ್ (42), ರಿಯಾನ್ (14), ಅದ್ನಾನ್ (12), ಫಯಾಜ್ (10), ಮೆಹರುನ್ನಿಸಾ (11), ಅಜಾನ್ (5) , ಜೈನಬ್ (8) ಅಮೀರ್ ಜಾನ್ (52), ಶಬನಾಜ್ (18), ನಸೀಮಾ, (40), ಸಲ್ಮಾ (33) ಹಾಗೂ ರೇಷ್ಮಾ ಬಾನು (48) ಎಂಬುವರು ಗಾಯಗೊಂಡಿದ್ದಾರೆ. ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ರಾತ್ರಿ ತಿಂಡಿ, ತಿನಿಸುಗಳನ್ನು ಮಾಡಿಡಲಾಗಿತ್ತು. ಈ ವೇಳೆ ಸಿಲಿಂಡರ್ ಆಫ್ ಮಾಡುವುದನ್ನು ಮರೆತಿದ್ದು, ಗ್ಯಾಸ್ ಸೋರಿಕೆಯಾಗಿದೆ.
ಮನೆ ಗೋಡೆ ಸ್ಫೋಟದ ರಭಸಕ್ಕೆ ಛಿದ್ರ ಛಿದ್ರಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ಫರ್ನಿಚರ್ ಟಿವಿ ಎಲ್ಲವೂ ಸುಟ್ಟು ಕರಕಲಾಗಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಾಜಾಜಿನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.