ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಕರೆ ಕರೆ ನೀಡಿದ್ದ ಕರ್ನಾಟಕ ಬಂದ್ ರದ್ದು | JANATA NEWS

ಬೆಂಗಳೂರು : ಭ್ರಷ್ಟಾಚಾರ ವಿರೋಧಿಸಿ ನಾಳೆ ಕಾಂಗ್ರೆಸ್ನಿಂದ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಾಹನಗಳಿಗೆ ಅಡ್ಡಿಪಡಿಸದೇ ಅಂಗಡಿ ಮುಂಗಟ್ಟು ಮಾತ್ರ ಮುಚ್ಚಿ ಬಂದ್ ನಡೆಸಲು ಈ ಮುನ್ನ ತೀರ್ಮಾನಿಸಲಾಗಿತ್ತು. ಆದರೆ, ಪರೀಕ್ಷೆ ಬರೆಯುವವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ರಾಜ್ಯ ಬಂದ್ ಕರೆಯನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಮೂಲಕ ಕರೆ ಮಾಡಿದ್ದರು. ಸ್ಕ್ರೀನಿಂಗ್ ಕಮಿಟಿ ಆಗುವ ವೇಳೆ ಎಲ್ಲಾ ನಾಯಕರು ಸೇರಿ ಈ ನಿರ್ಧಾರ ಹೇಳಿದ್ದಾರೆ. ಹೀಗಾಗಿ ನಾಳೆ ಬಂದ್ ಇರುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಾಲಾ ಸಂಸ್ಥೆಗಳು ಬಂದ್ ಬೇಡ ಎಂದು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ನಾಯಕರು ಬಂದ್ ಮುಂದೂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಡದ ಮೇರೆಗೆ ನಾಳೆ ನಡೆಸಬೇಕಿದ್ದ ಸಾಂಕೇತಿಕ ಕರ್ನಾಟಕ ಬಂದ್ ಅನ್ನು ವಾಪಸ್ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಗುರುವಾರ ಬೆಳಗ್ಗೆ 9 ರಿಂದ 11 ಗಂಟೆಯ ವರೆಗೆ ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕರೆ ನೀಡಿತ್ತು. ದ್ವಿತೀಯ ಪಿಯುಸಿ ಮಕ್ಕಳ ಪರೀಕ್ಷೆ ಹಿನ್ನೆಲೆ, ಕಾಂಗ್ರೆಸ್ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.