ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಬಹಿಷ್ಕಾರ ಪ್ರಕರಣ: 12 ಮಂದಿ ಬಂಧನ | JANATA NEWS

ಚಾಮರಾಜನಗರ : ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಗ್ರಾಮದ ಮುಖಂಡರು ಅಮಾನವೀಯವಾಗಿ ನಡೆದುಕೊಂಡು ದಂಪತಿಗೆ ಬಹಿಷ್ಕಾರ ಹಾಕಿದ್ದ ಘಟನೆಗೆ ಸಂಬಂದಿಸಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಈ ಹಿಂದೆ ನಾಲ್ವರನ್ನು ಬಂಧಿಸಿದ್ದರು ಮತ್ತು ಎಂಟು ಆರೋಪಿಗಳು ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿಯಲ್ಲಿ ಪ್ರೇಮಿಗಳಿಬ್ಬರು ಅಂತರ್ ಜಾತಿ ವಿವಾಹ ಆಗಿದ್ದಕ್ಕೆ ಗ್ರಾಮದ ಯಜಮಾನರು 3 ಲಕ್ಷ ದಂಡ ಹಾಕಿ ಗ್ರಾಮದಿಂದ ಹೊರ ಉಳಿಯುವಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ಕೊಳ್ಳೇಗಾಲ ಡಿ.ವೈ.ಎಸ್.ಪಿ ಕಚೇರಿಗೆ ಗೋವಿಂದರಾಜು ಹಾಗೂ ಶ್ವೇತಾ ದೂರು ಕೊಟ್ಟು ಅಳಲು ತೋಡಿಕೊಂಡಿದ್ದರು.
ಗೋವಿಂದರಾಜು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಜನಾಂಗಕ್ಕೆ ಸೇರಿದ ಪ್ರಕಾಶ್ ಎಂಬುವರ ಮಗಳಾದ ಶ್ವೇತಾ ಜೊತೆ ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ 5 ವರ್ಷಗಳ ಹಿಂದೆ ಮಳವಳ್ಳಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಸಿಕೊಂಡಿದ್ದರು.
ಗೋವಿಂದರಾಜು ಮಳವಳ್ಳಿಯಲ್ಲಿ ಮನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಆಗಾಗ ಗೋವಿಂದರಾಜು ಹಾಗೂ ಶ್ವೇತ ಕುಣಗಳ್ಳಿ ಗ್ರಾಮಕ್ಕೆ ಬಂದು ಹೋಗುತ್ತಿದ್ದು ಐದು ವರ್ಷದಿಂದ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಗೋವಿಂದರಾಜು ಅವರ ಮನೆಯಲ್ಲಿ ಅಂತರ್ ಜಾತಿ ವಿವಾಹ ತಿಳಿದಿದ್ದರೂ ಸಹ ಮನೆಯವರು ಯಾರು ಸಹ ತೊಂದರೆ ನೀಡಲಿಲ್ಲ. ತಿಂಗಳಿಗೆ 2 ರಿಂದ 3 ಬಾರಿ ಗ್ರಾಮಕ್ಕೆ ಬಂದು ಹೋಗುತ್ತಿದ್ದರು.
ಆದರೆ ಗೋವಿಂದರಾಜು ಅವರ ಅಕ್ಕಪಕ್ಕದ ನಿವಾಸಿಗಳು ಅಂತರ್ ಜಾತಿ ವಿವಾಹದ ಬಗ್ಗೆ ಮಾಹಿತಿಯನ್ನು ಪಡೆದು ಶ್ವೇತಾ ನಮ್ಮ ಜಾತಿಯವಳಲ್ಲ, ಅವಳು ದಲಿತ ಜನಾಂಗಕ್ಕೆ ಸೇರಿದವಳು ಎಂದು ಪಕ್ಕದ ಮನೆಯವರಾದ ಜಯಲಕ್ಷ್ಮಿ, ಮಧು, ರಂಗಸ್ವಾಮಿ, ಕುಳ್ಳ, ಮಹದೇವಪ್ಪ ಮಹದೇವ ಶೆಟ್ಟಿ ಇವರುಗಳು ಗ್ರಾಮದ ಯಜಮಾನರುಗಳಿಗೆ ಮಾಹಿತಿ ನೀಡಿ ಎರಡರಿಂದ ಮೂರು ಬಾರಿ ಪಂಚಾಯಿತಿ ನಡೆಸಿ ದಂಡ ಕಟ್ಟಬೇಕು ಎಂದು ಸೂಚಿಸಿದ್ದರು.
ದಂಪತಿ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ಆದರೆ, ದೂರಿನ ವಿಷಯ ತಿಳಿದ ಹಿರಿಯರು ದಂಡದ ಮೊತ್ತವನ್ನು 6 ಲಕ್ಷಕ್ಕೆ ಹೆಚ್ಚಿಸಿ ಗ್ರಾಮದಲ್ಲಿ ಗೋವಿಂದರಾಜು ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಗ್ರಾಮಸ್ಥರು ಕುಟುಂಬವನ್ನು ಗ್ರಾಮದಿಂದ ಹೊರಗೆ ಕಳುಹಿಸಿ, ಗ್ರಾಮದಿಂದ ಪಡಿತರ, ತರಕಾರಿ, ಹಾಲು ಖರೀದಿಸಬಾರದು ಮತ್ತು ನೀರು ತೆಗೆದುಕೊಳ್ಳಬಾರದು ಎಂದು ಆದೇಶಿಸಿದ್ದಾರೆ ಮತ್ತು ಅವರ ಈ ಆದೇಶವನ್ನು ಉಲ್ಲಂಘಿಸಿದರೆ ದಂಪತಿಯನ್ನು ಜೀವಂತ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಕೊಳ್ಳೇಗಾಲ ಡಿವೈಎಸ್ಪಿ ದೂರು ಪಡೆದು ಮಾಂಬಳ್ಳಿ ಪೊಲೀಸರಿಗೆ ಎಸ್ಸಿಎಸ್ಟಿ ದೌರ್ಜನ್ಯದಡಿ ಪ್ರಕರಣ ದಾಖಲಿಸುವಂತೆ ಸೂಚಿಸಿ ತನಿಖೆ ಕೈಗೊಂಡಿದ್ದರು. ಅದರಂತೆ, ಈಗ 12 ಮಂದಿ ಬಂಧನವಾಗಿದೆ.