ರಾಜ್ಯದ ಮೊದಲ ಐಐಟಿ ಲೋಕಾರ್ಪಣೆ, ವಿಶ್ವದಲ್ಲೇ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಉದ್ಘಾಟನೆ! | JANATA NEWS

ಧಾರವಾಡ : ಧಾರವಾಡದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಅನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಮೊದಲ ಐಐಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಧಾರವಾಡ ಐಐಟಿ ಇದೀಗ ಲೋಕಾರ್ಪಣೆಗೊಂಡಿದೆ.
ಧಾರವಾಡದ ಐಐಟಿ ಕ್ಯಾಂಪಸ್, ಸಿದ್ದರೂಡ ಸ್ವಾಮೀಜಿ ರೈಲು ಪ್ಲಾಟ್‌ಫಾರ್ಮ್ ಸೇರಿದಂತೆ ಹಲವು ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾರತ ಪ್ರಜಾಪ್ರಭುತ್ವದ ತಾಯಿಯಿದ್ದಂತೆ. ಕೆಲ ವರ್ಷಗಳ ಹಿಂದೆ ಲಂಡನ್ನಲ್ಲಿ ಬಸವಣ್ಣರವರ ಮೂರ್ತಿ ಅನಾವರಣಗೊಳಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಆದರೆ ಇಂದು ಬಸವೇಶ್ವರರಿಗೆ ಕೆಲವೊಬ್ಬರು ಅಪಮಾನ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮಾಡಿದರು.
ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ ಒಟ್ಟು 1,505 ಮೀಟರ್ ಉದ್ದವನ್ನು ಒಳಗೊಂಡಿದೆ. ನೈಋತ್ಯ ರೈಲ್ವೆ ವಲಯದ ಸಿದ್ಧಾರೂಢ ಸ್ವಾಮಿಜಿ ರೈಲು ನಿಲ್ದಾಣವು ಇದಕ್ಕೂ ಮುನ್ನ 550 ಮೀಟರ್ ಉದ್ದ ಹೊಂದಿತ್ತು. ಇದೀಗ ಹುಬ್ಬಳ್ಳಿ ಪ್ಲಾಟ್ ಫಾರ್ಂ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದೆ.
ಧಾರವಾಡದಲ್ಲಿ ನಿರ್ಮಿಸಲಾಗಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೇ 2019ರಲ್ಲಿ ಈ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರೇ ಇದನ್ನು ಲೋಕಾರ್ಪಣೆ ಮಾಡಿದ್ದಾರೆ.
ಬರೋಬ್ಬರಿ 850 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಐಐಟಿ ಧಾರವಾಡದಲ್ಲಿ 4 ವರ್ಷಗಳ ಬಿ.ಟೆಕ್., ಇಂಟರ್ ಡಿಸಿಪ್ಲಿನರಿ, 5 ವರ್ಷಗಳ BS-MS ಪ್ರೋಗ್ರಾಂ, ಪಿಎಚ್‌ಡಿ ಮತ್ತು ಎಂಟೆಕ್ ಕೋರ್ಸ್ಗಳು ಇವೆ.
ಈ ಕ್ಯಾಂಪಸ್ ದೇಶದ ಮೊದಲ ಸ್ಮಾರ್ಟ್ ಮತ್ತು ಹಸಿರು ಐಐಟಿ ಕ್ಯಾಂಪಸ್ ಎಂಬ ಖ್ಯಾತಿ ಪಡೆದಿದೆ. ವಿದ್ಯುತ್ ಮತ್ತು ನೀರಿನ ವಿಚಾರದಲ್ಲಿ ಈ ಕ್ಯಾಂಪಸ್ ಸ್ವಾವಲಂಬಿಯಾಗಿದೆ ಅಂತ ಹೇಳಲಾಗುತ್ತಿದೆ. ಐಐಟಿ ಕ್ಯಾಂಪಸ್ ಮಾಲಿನ್ಯ ಮುಕ್ತವಾಗಿ ಇರಲಿದೆ. ಇದಕ್ಕಾಗಿ ಕ್ಯಾಂಪಸ್‌ನಲ್ಲಿ ಸೈಕಲ್‌ಗಳು ಮತ್ತು ಇ-ವಾಹನಗಳನ್ನು ಮಾತ್ರ ಬಳಸಲಾಗುತ್ತದೆ. ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಪ್ರತಿರೂಪವಾದ ಕಲ್ಲಿನ ರಥದ ಪ್ರತಿಕೃತಿಯು ಆವರಣದ ಪ್ರವೇಶದ್ವಾರದಲ್ಲಿರೋದು ಮತ್ತೊಂದು ವಿಶೇಷ.