ಕಾಂಗ್ರೆಸ್ ನವರಿಗೆ ನನ್ನ ಸಮಾಧಿ ಚಿಂತೆ, ನನಗೆ ಅಭಿವೃದ್ಧಿ ಚಿಂತೆ | JANATA NEWS

ಮಂಡ್ಯ : ಇಂದು ಪ್ರಧಾನಿ ಮೋದಿ ಜಿಲ್ಲೆಗೆ ಭೇಟಿ ನೀಡಿದ್ದು, ಬೆಂಗಳೂರು - ಮೈಸೂರು ದಶಪಥ ರಸ್ತೆಯನ್ನು ಉದ್ಘಾಟನೆ ಮಾಡಿದ್ದಾರೆ. ಅದಕ್ಕೂ ಮೊದಲು ಜೆಡಿಎಸ್ ಭದ್ರಕೋಟೆಯಲ್ಲಿ ನಮೋ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಮಂಡ್ಯ ಜನ ಪ್ರಧಾನಿ ಮೇಲೆ ಕೇಸರಿ ಹೂ ಮಳೆಯನ್ನೇ ಸುರಿಸಿದರು.

ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿ ಬಾರಿಯೂ ಕರ್ನಾಟಕಕ್ಕೆ ಬಂದಾಗ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಸಕ್ಕರೆ ನಗರ ಮಂಡ್ಯ ಜನ ತೋರಿಸಿದ ಪ್ರೀತಿಗೆ ವಂದನೆ. ಸಕ್ಕರೆ ನಗರದ ಪ್ರೀತಿಗೆ ಶಿರಬಾಗಿ ನಮಿಸುತ್ತೇನೆ. ತಾಯಿ ಭುವನೇಶ್ವರಿಗೆ ನನ್ನ ನಮನಗಳು, ಆದಿ ಚುಂಚನಗಿರಿ, ಮೇಲುಕೋಟೆಯ ಗುರುಗಳಿಗೂ ನಮನಗಳು, ಸಕ್ಕರೆ ನಗರ ಮಂಡ್ಯ, ಮಧುರ ಮಂಡ್ಯ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಕಳೆದ ಕೆಲವು ದಿನಗಳಿಂದ ಕರ್ನಾಟಕ ಜನತಾ ಜನಾರ್ದನರ ಭೇಟಿಯ ಅವಕಾಶ ಸಿಗುತ್ತಿದೆ. ಇಲ್ಲಿ ನನಗೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ನೀವು ನಮಗೆ ನೀಡಿದ ಪ್ರೀತಿಯನ್ನು ಬಡ್ಡಿ ಸಮೇತ ವಾಪಸ್ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಹೆದ್ದಾರಿ ಉದ್ಘಾಟನೆಯು ಪರಿಶ್ರಮದ ಭಾಗವಾಗಿದೆ. ಮೈಸೂರು-ಬೆಂಗಳೂರು ನಡುವೆ ಅರ್ಧಕ್ಕಿಂತಹ ಪ್ರಯಾಣ ಅವಧಿ ಕಡಿಮೆಯಾಗಿದೆ. ಮೈಸೂರು-ಕುಶಾಲನಗರ ನಡುವೆಯೂ ಹೆದ್ದಾರಿ ಅಭಿವೃದ್ಧಿ ಆಗಲಿದೆ. ಇದರ ಮೂಲಕ ಸಮೃದ್ಧಿಯ ರಸ್ತೆಯು ತೆರೆದುಕೊಳ್ಳಲಿದೆ. ದೇಶದಲ್ಲಿ ಮೂಲಸೌಕರ್ಯ ಬಗ್ಗೆ ಚರ್ಚೆಯಾದಾಗಲೆಲ್ಲ ಸರ್. ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಪ್ರಸ್ತುತ. ಅವರ ಮುಂದಾಲೋಚನೆಯ ಫಲ ಈಗ ಇಲ್ಲಿ ಕಾಣುತ್ತಿದೆ ಎಂದರು. 2014ಕ್ಕೂ ಮೊದಲಿದ್ದ ಕಾಂಗ್ರೆಸ್ ಸರ್ಕಾರ ಬಡವರನ್ನು ಲೂಟಿ ಮಾಡಿದೆ. ಕಾಂಗ್ರೆಸ್ ನಾಯಕರು ನರೇಂದ್ರ ಮೋದಿಯವರನ್ನು ಸಮಾಧಿ ಮಾಡುವ ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ.
ಬಡವರನ್ನು ಲೂಟಿ ಮಾಡುವ ಸರ್ಕಾರವಿತ್ತು. ಅದನ್ನು ಕಿತ್ತೊಗೆಯಲಾಗಿದೆ. ಅಭಿವೃದ್ಧಿಗಾಗಿ ಮತ್ತೆ ಡಬ್ಬಲ್ ಎಂಜಿನ್ ಸರ್ಕಾರವನ್ನೇ ಗೆಲ್ಲಿಸಿ. ಕಾಂಗ್ರೆಸ್ ನವರು ಸಮಾಧಿ ತೆಗೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ನಾನು ಬೆಂಗಳೂರು - ಮೈಸೂರು ಹೆದ್ದಾರಿಯ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ಕಾಂಗ್ರೆಸ್ ನವರಿಗೆ ನನ್ನ ಸಮಾಧಿ ಚಿಂತೆ, ನನಗೆ ಅಭಿವೃದ್ಧಿ ಚಿಂತೆ ಎಂದಿದ್ದಾರೆ.
ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಗೆ ಈ ರಸ್ತೆಯೂ ಸಾಕ್ಷಿಯಾಗಿದೆ. ನಿಮ್ಮ ಪ್ರೀತಿಯ ಋಣವನ್ನು ಅಭಿವೃದ್ಧಿ ಮೂಲಕ ಬಡ್ಡಿ ಸಮೇತ ತೀರಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಈ ಹೈವೇ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ಹೈವೆ ಬಗ್ಗೆ ಬಹಳ ಮೆಚ್ಚುಗೆ ಬರುತ್ತಿದೆ. ದೇಶದ ಎಲ್ಲಾ ಕಡೆ ಈ ರೀತಿ ಹೈವೆ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ಈ ರಸ್ತೆ ನೋಡಿದ ಯುವಕರ ಮನದಲ್ಲಿ ಹೆಮ್ಮೆ, ಗರ್ವ ಮೂಡಿದೆ ಎಂದು ನುಡಿದರು.
