ಫೈಟರ್ ರವಿ ಯಾರು ಅಂತ ಮೋದಿಗೆ ಗೊತ್ತಿರಲಿಲ್ಲ, ಇದಕ್ಕೆ ಪ್ರಧಾನಿ ಜವಾಬ್ದಾರರಲ್ಲ | JANATA NEWS

ಬೆಂಗಳೂರು : ರೌಡಿಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿ, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಕಿಡಿಕಾರಿತ್ತು.
ಇದೀಗ ಕಾಂಗ್ರೆಸ್ ಮಾಡಿದ ಟೀಕೆಗೆ ಪ್ರತಿಕ್ರಿಯಿಸುತ್ತಾ, ಫೈಟರ್ ರವಿ ಯಾರು ಅಂತ ಮೋದಿ ಅವರಿಗೆ ಗೊತ್ತಿರಲಿಲ್ಲ. ಇದಕ್ಕೆ ಪ್ರಧಾನಿಗಳು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಅವರ ಲೈನ್ ಅಪ್ನಲ್ಲಿ ಹೇಗೆ ಬಂದ್ರು? ಯಾಕಾಗಿ ಬಂದ್ರು? ಯಾವ ಉದ್ದೇಶದಿಂದ ಬಂದ್ರು ಎನ್ನುವುದನ್ನು ಗಮನಿಸುತ್ತೇವೆ. ಈ ಬಗ್ಗೆ ಕಾಂಗ್ರೆಸ್‌ನವರು ಟ್ರೋಲ್ ಮಾಡುವ ಅಗತ್ಯವಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಫೈಟರ್ ರವಿ ಸ್ವಾಗತ ಕೋರಿರುವುದರಲ್ಲಿ ಲೋಪವಾಗಿದೆ. ಫೈಟರ್ ರವಿ ಸ್ವಾಗತ ಅಲ್ಲಿನ ಸ್ಥಳೀಯರ ಕಣ್ತಪ್ಪಿನಿಂದ ಆಗಿದೆ. ಮೋದಿ ಸ್ವಾಗತ ಪಟ್ಟಿಯನ್ನು ಮೊದಲೇ ಗಮನಿಸಿಲ್ಲ. ಸ್ವಾಗತ ಪಟ್ಟಿಯಲ್ಲಿ ಫೈಟರ್ ರವಿ ಹೆಸರು ಹೇಗೆ ಬಂತು, ತಪ್ಪು ಎಲ್ಲಾಯ್ತು ಅಂತ ಪರಿಶೀಲಿಸುತ್ತೇವೆ. ಕಾಂಗ್ರೆಸ್ ನವರು ಇದರಲ್ಲಿ ಹುಳುಕು ನೋಡೋದು ಬೇಡ ಎಂದಿದ್ದಾರೆ.
ಕಾಂಗ್ರೆಸ್ನ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ರೌಡಿ ಶೀಟರ್ ಆಗಿರುವ ಮುಖಂಡರು ಇದ್ದಾರೆ. ಇವತ್ತು ಕಾಂಗ್ರೆಸ್ ನೇತೃತ್ವ ವಹಿಸಿರುವವರೇ ರೌಡಿ ಶೀಟರ್. ಈ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಒಂದು ಬೆರಳು ತೋರಿಸಿದರೆ, ನಾಲ್ಕು ಬೆರಳು ಅವರನ್ನು ತೋರಿಸುತ್ತದೆ ಎನ್ನುವುದನ್ನ ನೆನಪಿಟ್ಟುಕೊಳ್ಳಬೇಕು. ಇದರ ಬಗ್ಗೆ ಮಾತಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ. ಚುನಾವಣಾ ಗಿಮಿಕ್ಗಾಗಿ ಕಾಂಗ್ರೆಸ್‌ನವರು ಮಾತಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ಮಾಡಿದರು.