ರಾಮನಗರದಿಂದ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆ ಆಗಿರುವುದು ನಿಜ! | JANATA NEWS

ರಾಮನಗರ : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ರಾಮನಗರದಲ್ಲಿ ಸಂಸದ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆ ಆಗಿರುವುದು ನಿಜ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿ, ಡಿ ಕೆ ಸುರೇಶ್ ಸ್ಪರ್ಧೆ ವಿಚಾರವಾಗಿ ಕೂತು ಮಾತನಾಡಬೇಕು. ನನಗೆ ಈ ಬಗ್ಗೆ ಸಂದೇಶ ಸಿಕ್ಕಿದೆ. ಹೈಕಮಾಂಡ್ ನಿಂದ ಸಂದೇಶ ಬಂದಿದ್ದು ಹೌದು. ಈ ಕುರಿತು ಪಾರ್ಟಿ ಹೇಳುತ್ತಿದೆ, ನಾವಿನ್ನು ತೀರ್ಮಾನ ಮಾಡಿಲ್ಲ.
ಈ ಹಿಂದೆ ಇದೇ ವಿಚಾರದ ಬಗ್ಗೆ ಚರ್ಚೆ ಆಗಿತ್ತು. ಕಾರ್ಯಕರ್ತರೂ ಇದಕ್ಕೆ ಒತ್ತಾಯ ಮಾಡಿದ್ದರು. ಆದರೆ ನಾವು ಅದರ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಮತ್ತೆ ಬೈ ಎಲೆಕ್ಷನ್ ಎಲ್ಲಾ ಮಾಡುವುದು ನನಗೆ ಇಷ್ಟ ಇಲ್ಲಾ. ಡಿ.ಕೆ. ಸುರೇಶ್ ಅರ್ಜಿಯನ್ನು ಹಾಕಿಲ್ಲ, ಅದರ ಬಗ್ಗೆ ಚರ್ಚೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕ್ಷೇತ್ರದಲ್ಲಿ ಒಂದು ಇತಿಹಾಸ ಇದೆ. ಪಕ್ಷ ಸೂಚಿಸಿದ ಮೇಲೆ ಏನೂ ಮಾಡಲಾಗದು. ನಾನು ಸಚಿವನಾಗಿದ್ದವನು ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ? ರಾಜಕೀಯದಲ್ಲಿ ಕೆಲವು ಸಂದರ್ಭಗಳಲ್ಲಿ ಅನಿವಾರ್ಯ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಕಾರ್ಯಕರ್ತರು, ಮುಖಂಡರು ಬಹಳ ದಿನದಿಂದ ಒತ್ತಾಯ ಮಾಡುತ್ತಿದ್ದಾರೆ. ನನಗೆ ಬೈ ಎಲೆಕ್ಷನ್ ಮಾಡುವುದು ಇಷ್ಟ ಇಲ್ಲ. ಈಗ ಪಾರ್ಟಿ ಹೇಳ್ತಿದೆ, ಅದನ್ನ ಇನ್ನೂ ಚರ್ಚೆ ಮಾಡಿಲ್ಲ. ಡಿ.ಕೆ.ಸುರೇಶ್ ಇನ್ನೂ ಅರ್ಜಿ ಹಾಕಿಲ್ಲ ಎಂದಿದ್ದಾರೆ.
ಧ್ರುವನಾರಾಯಣ್ ಪುತ್ರ ದರ್ಶನ್ಗೆ ಟಿಕೇಟ್ ನೀಡುವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.