ನಾನು ಬಿಜೆಪಿ ಬಿಟ್ಟು ಹೋಗಲ್ಲ, ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ಸುಮ್ಮನಿರಲ್ಲ: ಕಣ್ಣೀರು ಹಾಕಿದ ಸಚಿವ ಸೋಮಣ್ಣ | JANATA NEWS

ಬೆಂಗಳೂರು : ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೊರ ಹೋಗುವುದಿಲ್ಲ. ಬಿಜೆಪಿಯಲ್ಲೇ ಸಕ್ರೀಯನಾಗಿ ಕೆಲಸ ಮಾಡುತ್ತಿದ್ದು, ಯಾರ ಮುಲಾಜಿಗೂ ಒಳಗಾಗಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ಸುಮ್ಮನಿರಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡ್ತೀನಿ, ಇಲ್ಲದಿದ್ರೆ ಸುಮ್ಮನಾಗ್ತೀನಿ. ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರು ಅಲ್ಲ. ಯಾರೂ ಈ ರೀತಿ ಮಾಡಬಾರದು ಎಂದು ಸಚಿವ ವಿ.ಸೋಮಣ್ಣ ಕಣ್ಣೀರು ಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಕ್ಕದಲ್ಲಿ ಕುಳಿತು ಸಚಿವ ವಿ.ಸೋಮಣ್ಣ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ರಾಜಕೀಯ ಚರ್ಚೆಗಳಿಗೆ ಕಾರಣವಾಗಿತ್ತು. ವಿ.ಸೋಮಣ್ಣ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಊಹಾಪೋಹ ಸೃಷ್ಟಿಯಾಗಿತ್ತು.
ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎಂಬ ವಿಚಾರ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಆಗ್ತಿತ್ತು. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಸೋಮಣ್ಣ, ಸುಳ್ಳು ಹೇಳಿ ನಾನು ನನ್ನ ಜೀವನ ಮಾಡಲ್ಲ. ನಮ್ಮ ತಾಯಿ, ತಂದೆ ನನಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ನಾನು ಯಾರ ಮುಲಾಜಿನಲ್ಲೂ ಬದುಕಿಲ್ಲ. ಅನಾವಶ್ಯಕವಾಗಿ ಇನ್ನೊಬ್ಬರ ತೇಜೋವಧೆ ಮಾಡೋದು ಒಳ್ಳೆಯದಲ್ಲ ಎಂದು ಸೋಮಣ್ಣ ಕಣ್ಣೀರು ಹಾಕಿದರು.
ನಾನು ಕಾಂಗ್ರೆಸ್ ಸೇರುತ್ತೇನೆ ಎಂಬ ವದಂತಿ ಹಬ್ಬಿದೆ. ಇದು ಸತ್ಯಕ್ಕೆ ದೂರವಾದುದು. ಡಿ.ಕೆ.ಶಿ ಅವರೊಂದಿಗೆ ಸಂಚರಿಸುತ್ತಿದ್ದ ಫೋಟೋ ವೈರಲ್ ಆಗಿದ್ದು, ಇದು ಸಾಕಷ್ಟು ಹಳೆಯ ಫೋಟೋ. ಹಳೆ ಫೋಟೋ ವೈರಲ್ ಆಗಿರುವುದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ. ನಾನೊಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ. ನನಗೆ ಏನಾದರೂ ಸಮಸ್ಯೆ ಆಗಿದ್ದರೇ ರಾಜೀನಾಮೆ ಕೊಡುತ್ತಿದ್ದೆ. ಆದರೆ ಆ ರೀತಿಯ ಸಮಸ್ಯೆ ನನಗೆ ಏನೂ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೇ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೇ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.