ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ! | JANATA NEWS

ಬೆಂಗಳೂರು : ಬೈಯಪ್ಪನ ಹಳ್ಳಿ ರೈಲ್ವೆ ನಿಲ್ದಾಣದ ಬಳಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಮೃತ ದೇಹ ಸಿಕ್ಕಿದೆ.
ಕಳೆದ ಮಾರ್ಚ್ 13ರಂದು 30 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಸಿಕ್ಕಿತ್ತು. ನಂತರ ಯಶವಂತಪುರ ರೈಲ್ವೇ ನಿಲ್ದಾಣದಲ್ಲೂ ಇದೇ ರೀತಿ ನೀಲಿ ಬಣ್ಣದ ಡ್ರಮ್ವೊಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಪ್ಲಾಟ್‌ಫಾರ್ಮ್ -1 ರಲ್ಲಿ ಬಟ್ಟೆರಾಶಿಯೊಂದಿಗೆ ಡ್ರಮ್ನೊಳಗೆ ಶವ ಹುದುಗಿಸಿಡಲಾಗಿತ್ತು. ಇದೇ ರೀತಿಯ ಘಟನೆ ಕಳೆದ ವರ್ಷ ಡಿಸೆಂಬರ್‌ನಿಂದ ಈವರೆಗೂ ಮೂರನೇ ಬಾರಿ ನಡೆದಿದೆ.
ಬೈಯ್ಯಪ್ಪನ ಹಳ್ಳಿ ರೈಲ್ವೆ ನಿಲ್ದಾಣದ ಮುಖ್ಯ ದ್ವಾರದ ಬಳಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಆರೋಪಿಗಳ ಚಲನ ವಲನ ದಾಖಲಾಗಿದೆ. ಮೂವರು ವ್ಯಕ್ತಿಗಳು ಡ್ರಮ್ ಇರಿಸಿ ಹೋಗುವ ದೃಶ್ಯ ಪೊಲೀಸರಿಗೆ ಸಿಕ್ಕಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ರೈಲ್ವೇ ಎಸ್ಪಿ ಸೌಮ್ಯಲತಾ, ನಮಗೆ ನೀಲಿ ಡ್ರಮ್ನಿಂದ ಕೊಳೆತ ವಾಸನೆ ಬರುತ್ತಿದೆ ಎಂದು ದೂರವಾಣಿ ಕರೆ ಬಂದಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶವ ಇರುವುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ. ಮೃತರು ಯಾರು ಎಂದು ಪತ್ತೆ ಹಚ್ಚಲಾಗುವುದು. ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ ಎಂದರು.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೊಂದು ಸೈಕೋ ಕಿಲ್ಲರ್ ಗ್ಯಾಂಗ್‌ನ ಕೃತ್ಯ ಇರಬಹುದು ಎಂದು ಶಂಕಿಸಿದ್ದಾರೆ.