ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ರೂಪಿಸಿದ್ದ ಕುಖ್ಯಾತ ರೌಡಿ ಅರೆಸ್ಟ್ | JANATA NEWS

ಬೆಂಗಳೂರು : ಸ್ಯಾಂಡಲ್ವುಡ್ ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿ ರಾಜೇಶ್ ಅಲಿಯಾಸ್ ಕರಿಯಾ ರಾಜೇಶ್ನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.
ಕುಖ್ಯಾತ ರೌಡಿ ಪರಂದಾಮ ಮತ್ತು ಬಾಂಬೆ ರವಿ ಸಹಚರರಾಗಿದ್ದ. ಈತನ ವಿರುದ್ಧ ಕಾಟನ್‌ಪೇಟೆ, ಹನುಮಂತನಗರ, ಬಸವನಗುಡಿ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ, ಕೊಲೆಗೆ ಸಂಚು ಸೇರಿದಂತೆ 10 ಪ್ರಕರಣಗಳು ದಾಖಲಾಗಿವೆ.
ಹೆಬ್ಬುಲಿ, ರಾಬರ್ಟ್, ಮದಗಜ ಸೇರಿದಂತೆ ಹಲವು ಚಿತ್ರಗಳ ನಿರ್ಮಾಪಕರಾದ ಉಮಾಪತಿ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಕಳೆದ ಎರಡು ವರ್ಷಗಳ ಹಿಂದೆ ಜಯನಗರ ಪೊಲೀಸರು 11 ಮಂದಿ ಆರೋಪಿಗಳ ಪೈಕಿ ರಾಜೇಶ್ ಸಹ ಒಬ್ಬನಾಗಿದ್ದ.
6 ಪ್ರಕರಣಗಳಲ್ಲಿ ಕೋರ್ಟ್‌ನಿಂದ ಖುಲಾಸೆಗೊಂಡಿದ್ದ. ಉಳಿದಂತೆ ನಾಲ್ಕು ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.
ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರಾಜೇಶ್ ಬಂಧನ ಭೀತಿಯಿಂದ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ. ಅಜ್ಞಾತ ಸ್ಥಳದಿಂದಲೇ ಹಲವರಿಗೆ ಫೋನ್ ಮಾಡಿ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಡುತ್ತಿದ್ದ.
ಕುಖ್ಯಾತ ರೌಡಿ ಬಾಂಬೆ ರವಿಯ ಸಹಚರನಾಗಿದ್ದ ರಾಜೇಶ್, ಹಳೆ ರೌಡಿ ಪರಂಧಾಮಯ್ಯನ ಶಿಷ್ಯನಾಗಿ ಗುರುತಿಸಿಕೊಂಡಿದ್ದ. ಸೌತ್ ಬಾಸ್ ಎಂದು ಶಿಷ್ಯಂದಿರಿಂದ ಕರೆಸಿಕೊಳ್ಳುತ್ತಿದ್ದ ಈತನನ್ನು ಬಂಧಿಸಲಾಗಿದೆ