ಸಾಲಿಗ್ರಾಮ ಕಲ್ಲುಗಳು ಎಂದು ಹೇಳಿ 2 ಕೋಟಿಗೆ ಮಾರಾಟ ಮಾಡಲು ಯತ್ನ! | JANATA NEWS

ಬೆಂಗಳೂರು : ಸಾಲಿಗ್ರಾಮ ಕಲ್ಲನ್ನು ಭಗವಾನ್ ವಿಷ್ಣುವಿನ ಪ್ರತಿರೂಪ ಎಂದು ನಂಬಿಸಿ ವಂಚನೆ ಮಾಡ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿಷ್ಣು ರೂಪದ ಕಲ್ಲು ಎಂದು ಹೇಳಿ ಮಾರಾಟಕ್ಕೆ ಮುಂದಾಗಿದ್ದ ಮಹಾರಾಷ್ಟ್ರ ಮೂಲದ ಮನೋಜ್ ಹಾಗೂ ಆದಿತ್ಯ ಸಾಗರ್ ಎಂಬುವರನ್ನು ಬಂಧಿಸಲಾಗಿದೆ. ಇವರು ಸಾಲಿಗ್ರಾಮ ಕಲ್ಲುಗಳು ಎಂದು ಹೇಳಿ 2 ಕಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಆರೋಪಿಗಳಿಂದ ಬರೋಬ್ಬರಿ 2 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದಾರೆ. ವಂಚಕರಿಬ್ಬರು ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ಗೆ ಗಿರಾಕಿಗಳನ್ನು ಕೆರದು ಮಾರಾಟಕ್ಕೆ ಮುಂದಾಗಿದ್ದರು. ಗುಜರಾತಿನ ಗೋಮತಿ ನದಿಯಿಂದ ತಂದಿರುವ ಬೆಲೆಬಾಳುವ ಕಲ್ಲುಗಳು, ಇದು ವಿಷ್ಣುವಿನ ಕಲ್ಲು. ಇದು ನಿಮ್ಮ ಬಳಿ ಇಟ್ಟುಕೊಂಡರೆ ಅದೃಷ್ಟ ಖುಲಾಯಿಸುತ್ತದೆ. ವಿಷ್ಣುರೂಪದ ಅದೃಷ್ಟಕಲ್ಲು ಇವು ಕೋಟ್ಯಾಂತರ ರೂಪಾಯಿಗೆ ಬೆಲೆಬಾಳಲಿದೆ ಎಂದು ನಂಬಿಸಿ ಎರಡು ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ತಂಡದ ಎಸಿಪಿ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಸಾಲಿಗ್ರಾಮದ ಎರಡು ಕಲ್ಲುಗಳು ಹಾಗೂ ಕೆಲ ರಾಸಾಯನಿಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ