ಮಾ.18ಕ್ಕೆ 108 ಅಡಿ ಮಾದಪ್ಪನ ಪ್ರತಿಮೆ ಲೋಕಾರ್ಪಣೆ | JANATA NEWS

ಚಾಮರಾಜನಗರ : ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಿರುವ 108 ಅಡಿ ಮಲೆಮಹದೇಶ್ವರನ ಪ್ರತಿಮೆ ಇದೇ ಮಾರ್ಚ್ 18 ರಂದು ಲೋಕಾರ್ಪಣೆಗೊಳ್ಳುತ್ತಿದೆ.
ಅಸಂಖ್ಯಾತಭಕ್ತರ ಪಾಲಿನ ದೈವ “ಮಾಯ್ಕರ” ಮಾದಪ್ಪನ ನೆಲದಲ್ಲಿ ಮುಗಿಲೆತ್ತರದಲ್ಲಿ 108 ಅಡಿ ಎತ್ತರದ ಮಾದಪ್ಪನ ಪ್ರತಿಮೆ ಸಿದ್ಧಗೊಂಡಿದ್ದು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ಬೆಳ್ಳಿರಥವೂ ಲೋಕಾರ್ಪಣೆ ಆಗಲಿದೆ.
₹20 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸದ್ಯ, ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿವೆ.

108 ಅಡಿ ಎತ್ತರ ಪ್ರತಿಮೆಯು ಎರಡು ಸ್ತರದಲ್ಲಿ ನಿರ್ಮಾಣವಾಗಿದೆ. ಕಲ್ಲು ಬಂಡೆಯ ರಚನೆಯ ಮೇಲೆ ವ್ಯಾಘ್ರನ ಮೇಲೆ ಕುಳಿತ ತ್ರಿಶೂಲ ಹಿಡಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ರೂಪಿಸಲಾಗಿದೆ.
ಕಲ್ಲುಬಂಡೆಯಾಕೃತಿಯ ರಚನೆಯಲ್ಲಿ ಗುಹೆಯ ಮಾದರಿಯಲ್ಲಿ ಎರಡು ಮಹಡಿಗಳಿವೆ. ತಳಭಾಗದಲ್ಲಿ ಮಹದೇಶ್ವರ ಬೆಟ್ಟದ ಚಾರಿತ್ರಿಕ ಹಿನ್ನಲೆ ಸಾರುವ ಕಲಾಕೃತಿ ಚಿತ್ರಗಳ ರಚನೆ, ಭಕ್ತರ ವಿಶ್ರಾಂತಿ ಸ್ಥಳಾವಕಾಶ ಸೇರಿದಂತೆ ಭಕ್ತರು, ಪ್ರವಾಸಿಗರಿಗೆ ಮಹದೇಶ್ವರ ಚರಿತ್ರೆ, ಪರಂಪರೆ ಸಾರುವ ಮ್ಯೂಸಿಯಂ ನಿರ್ಮಾಣವಾಗಲಿದೆ.
ಮಹದೇಶ್ವರರ ಪ್ರತಿಮೆ ನಿರ್ಮಾಣ ಸಂಪೂರ್ಣ ಕಾಂಕ್ರೀಟ್‌ನಿಂದ ನಿರ್ಮಾಣ ಗೊಂಡಿದ್ದು ನಿರ್ಮಾಣದ ಹೊಣೆಯನ್ನು ಬೆಂಗಳೂರಿನ ಪಿಎಸ್‌ಆರ್‌ಪಿ ಆರ್ಕಿಟೆಕ್ಟ್ ಕಂಪನಿ ಸಂಸ್ಥೆಗೆ ನೀಡಲಾಗಿತ್ತು. ಈ ಕಂಪನಿಯು ಹಿಂದೆಯೂ ಗದಗಿನಲ್ಲಿ 117 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಮತ್ತು ರಾಮ್‌ದುರ್ಗದಲ್ಲಿ ಶಿವನ ಮೂರ್ತಿಯನ್ನು ಉತ್ತಮವಾಗಿ ನಿರ್ಮಾಣ ಮಾಡಿತ್ತು. ಈ ಹಿನ್ನೆಲೆ ಮಹದೇಶ್ವರರ ಪ್ರತಿಮೆಯ ನಿರ್ಮಾಣ ಹೊಣೆಯನ್ನೂ ನೀಡಲಾಗಿತ್ತು.
ಮಹದೇಶ್ವರರ ಪ್ರತಿಮೆ ಅನಾವರಣಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಸರ್ಕಾರ ರಾಜಕೀಯ ಲಾಭಕ್ಕಾಗಿ ಅಪೂರ್ಣ ಕಾಮಗಾರಿ ಲೋಕಾರ್ಪಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಕ್ತರು ಕಿಡಿಕಾರಿದ್ದಾರೆ.