ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು: ಬಿ.ವೈ.ವಿಜಯೇಂದ್ರ | JANATA NEWS

ರಾಯಚೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.
ರಾಯಚೂರಿನಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿದ ವೇಳೆ ಸಿದ್ದರಾಮಯ್ಯ ವರುಣದಿಂದ ಸ್ಪರ್ಧಿಸುವ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಸಿ, ಕ್ಷೇತ್ರ ಹುಡುಕುವ ಪರಿಸ್ಥಿತಿ ಬರಬಾರದಿತ್ತು.
ಕಳೆದ ಬಾರಿ ಅವರ ವಿರುದ್ಧ ನಾನು ಸ್ಪರ್ಧಿಸುವ ಸನ್ನಿವೇಶ ಏರ್ಪಟ್ಟಿತ್ತು. ಆದರೆ, ಈ ಬಾರಿ ಯಡಿಯೂರಪ್ಪನವರು ತಮ್ಮ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ವರುಣಾದಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರೆಂಬುದು ಕೂಡ ಪಕ್ಷದ ಮುಖಂಡರಿಗೆ ಬಿಟ್ಟ ವಿಚಾರ ಎಂದರು.
ಶಿಕಾರಿಪುರದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿ, ಬಿಎಸ್ ಯಡಿಯೂರಪ್ಪ ಈಗಾಗಲೆ ಘೋಷಣೆ ಮಾಡಿದ್ದಾರೆ. ನಾನು ಶಿಕಾರಿಪುರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಂತಿಮ ತೀರ್ಮಾನ ಕೇಂದ್ರ ನಾಯಕರು ಮಾಡುತ್ತಾರೆ ಎಂದಿದ್ದಾರೆ.
ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಎಂಬ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿಕೆಗೆ, ಶಾಸಕರು ಉತ್ಸಾಹದಲ್ಲಿ ಹಾಗೆ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಯಾರು ಮುಖ್ಯಮಂತ್ರಿ ಆಗಬೇಕೆಂದು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.