ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ರದ್ದು: ಇದುವರೆಗೆ ಕಾಂಗ್ರೆಸ್ ನಾಯಕರು ಯಾಕೆ ಕೋರ್ಟ್ ಮೊರೆ ಹೋಗಿಲ್ಲ? | JANATA NEWS

ದಾವಣಗೆರೆ : ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ರದ್ದುಗೊಳಿಸಿದ ಬಗ್ಗೆ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲರಾಗಿದ್ದು, ರಾಹುಲ್ ಗಾಂಧಿಯವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಕೋರ್ಟ್ ತೀರ್ಪು ಅವರ ಪರ ಬಂದರೆ ನ್ಯಾಯಾಂಗದ ಜಯ ಎನ್ನುತ್ತಾರೆ. ಅದೇ ವಿರುದ್ಧ ಬಂದರೆ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಬೀದಿಯಲ್ಲಿ ಪ್ರತಿಭಟನೆ ಮಾಡಿದ್ರೆ ನ್ಯಾಯಾಲಯದ ತೀರ್ಪು ಬದಲಾಗುತ್ತಾ? ನಿಮ್ಮಲ್ಲಿ ಘಟಾನುಘಟಿ ವಕೀಲರು ಇದ್ದಾರೆ. ನಿಮಗೆ ತೀರ್ಪು ಸರಿಯಾಗಿಲ್ಲ ಅಂದರೆ ಹೈಯರ್ ಕೋರ್ಟ್ ಇದೆ. ಅಲ್ಲಿಗೆ ಹೋಗಿ ಎಂದು ರಾಹುಲ್ ಗಾಂಧಿ ಪ್ರಕರಣದಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ನಡೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದಾರೆ.
ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಗೆ ಒಳಗಾದರೆ ಸದಸ್ಯತ್ವ ರದ್ದಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಕಾಂಗ್ರೆಸ್ ನಾಯಕರು ಯಾಕೆ ಕೋರ್ಟ್ ಮೊರೆ ಹೋಗಿಲ್ಲ ಎಂದು ಪ್ರಶ್ನಿಸಿದರು.
ಅವರಲ್ಲಿ ಸಮರ್ಥ ವಕೀಲರಿದ್ದಾರೆ. ಆದರೆ ಅವರು ಕೋರ್ಟ್ಗೆ ಹೋಗದೆ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಬೀದಿಯಲ್ಲಿ ನಿಂತು ಡ್ರಾಮಾ ಮಾಡುತ್ತಿದ್ದಾರೆ. ಸದಸ್ಯತ್ವ ಕಳೆದುಕೊಂಡವರಲ್ಲಿ ರಾಹುಲ್ ಗಾಂಧಿ ಮೊದಲಿಗರಲ್ಲ. ಈವರೆಗೆ 10 ಮಂದಿ ಜನಪ್ರತಿನಿಧಿಗಳು ಸ್ಥಾನ ಕಳೆದುಕೊಂಡಿದ್ದಾರೆ. ಅಂದು ರಾಹುಲ್ ಗಾಂಧಿ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
2013ರಲ್ಲಿ ಸುಗ್ರಿವಾಜ್ಞೆ ಪ್ರತಿಯನ್ನು ರಾಹುಲ್ ಗಾಂಧಿ ಸಂಸತ್ನಲ್ಲಿ ಹರಿದುಹಾಕಿದ್ದರು. ಈ ಮೂಲಕ ಅನರ್ಹತೆಯ ಮಸೂದೆಗೆ ನನ್ನ ವಿರೋಧವಿದೆ ಎಂದು ಹೇಳಿ ಹಿರೋಯಿಸಂ ತೋರಿಸಿದ್ದರು. ಅಂದು ಹಾಗೆ ಮಾಡದಿದ್ದರೆ ಇಂದು ಅವರು ಅನರ್ಹತೆಯಿಂದ ಬಚಾವ್ ಆಗುತ್ತಿದ್ದರೇನೋ. ಅವರ ನಿಲುವೇ ಈಗ ಅವರಿಗೆ ಈ ಪರಿಸ್ಥಿತಿ ತಂದಿಟ್ಟಿದೆ. ಅಷ್ಟಕ್ಕೂ ಬಿಜೆಪಿ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಇದು ಕಾಂಗ್ರೆಸ್ನ ವ್ಯವಸ್ಥಿತ ಷಡ್ಯಂತ್ರ ಎನಿಸುತ್ತದೆ. ಅಲ್ಲದೆ ಸೋನಿಯಾಗಾಂಧಿ ಕುಟುಂಬ ಸಂವಿಧಾನ ಮತ್ತು ನ್ಯಾಯಾಲಯಕ್ಕಿಂತ ದೊಡ್ಡದು ಎಂದು ಭಾವಿಸಿದಂತಿದೆ ಎಂದರು.