ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ | JANATA NEWS

ಶಿವಮೊಗ್ಗ : ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತ ಹಿನ್ನೆಲೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಮೈತ್ರಿ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಇಂದು ಒಳ ಮೀಸಲಾತಿ ವಿರೋಧಿಸಿ ತಾಲೂಕು ಬಂಜಾರ ಸಮುದಾಯ ಪ್ರತಿಭಟನೆಗೆ ಕರೆ ನೀಡಿತ್ತು. ಈ ಹಿನ್ನೆಲೆ ಶಿಕಾರಿಪುರದಲ್ಲಿ ಸೇರಿದ ಪ್ರತಿಭಟನಾ ನಿರತರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಈ ವೇಳೆ ಕೆಲ ಉದ್ರಿಕ್ತರು ಶಿಕಾರಿಪುರದಲ್ಲಿದ್ದ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪ್ರತಿಭಟನಾಕಾರರು ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದಾರೆ.

ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ ನೂಕಾಟ ಉಂಟಾಗಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಲಾಗಿದೆ.
ತಾಲೂಕು ಕಚೇರಿ ಮುಂದೆಯೂ ಅಪಾರ ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.