ಬೈಕ್ ಪಾರ್ಕ್ ವಿಚಾರಕ್ಕೆ ಸ್ನೇಹಿತನ ಕೈಕಾಲು ಕಟ್ಟಿ ಹತ್ಯೆ ಮಾಡಿದ ರೂಮ್‌ಮೇಟ್ಸ್ | JANATA NEWS

ಬೆಂಗಳೂರು : ಸ್ನೇಹಿತರು ತಮ್ಮ ರೂಮ್ಮೇಟ್ ಒಬ್ಬನನ್ನು ವೈಯರ್ನಿಂದ ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕದ ಶ್ರೀನಿವಾಸಪುರ ಸಾಯಿ ಸಮೃದ್ಧಿ ಅಪಾರ್ಟ್‌ಮೆಂಟ್ ನಿವಾಸಿ ಜನಾರ್ಧನ್ ಭಟ್ಟ (29) ಮೃತ ವ್ಯಕ್ತಿ. ಕಳೆದ ಒಂದೂವರೆ ವರ್ಷಗಳಿಂದ ಶ್ರೀನಿವಾಸಪುರದಲ್ಲಿ ವಾಸವಾಗಿದ್ದರು. ಕಂಪನಿಯೊಂದರಲ್ಲಿ ಟಿ.ವಿ ರಿಪೇರಿ ಕೆಲಸ ಮಾಡಿಕೊಂಡಿದ್ದ.
ಅದೇ ಕಂಪೆನಿಯಲ್ಲಿ ಪ್ರಿಡ್ಜ್ , ಎಸಿ ರಿಪೇರಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ರಿಜ್ವಾನ್ ಹಾಗೂ ಸುಲೆಮಾನ್ ಕೆಲ ತಿಂಗಳಿಂದ ಜನಾರ್ಧನ್ ವಾಸವಾಗಿರುವ ರೂಮಿನಲ್ಲಿ ಒಟ್ಟಿಗೆ ನೆಲೆಸಿದ್ದರು.
ಮಾ.29ರ ತಡರಾತ್ರಿ ಅಪಾರ್ಟ್‌ಮೆಂಟ್ ಪಕ್ಕದಲ್ಲಿ ಬೈಕ್ ನಿಲುಗಡೆ ವಿಚಾರವಾಗಿ ಜನಾರ್ಧನ್ ಭಟ್ಟನ ಜತೆಗೆ ಸುಲೇಮನ್ ಮತ್ತು ರಿಜ್ವಾನ್ ಗಲಾಟೆ ಮಾಡಿದ್ದಾರೆ. ವಿಕೋಪಕ್ಕೆ ತಿರುಗಿದಾಗ ವೈರ್‌ನಿಂದ ಜನಾರ್ಧನ್ ಕೈಕಾಲು ಕಟ್ಟಿ ಬಾಯಿಗೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಮಾ.30ರಂದು ಅಪಾರ್ಟ್‌ಮೆಂಟ್‌ನ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಜನಾರ್ಧನ್ ಶವ ಪತ್ತೆಯಾಗಿದೆ. ಯಲಹಂಕ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.