ಸುದೀಪ್ ಕರ್ನಾಟಕದ ಜನರ ಜೊತೆ ನಿಲ್ಲಬೇಕು, ಪಕ್ಷದ ಪರವಾಗಿ ಅಲ್ಲ | JANATA NEWS

ಬೆಂಗಳೂರು : ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಘೋಷಣೆ ಮಾಡಿರುವ ನಡೆಗೆ ನಮ್ಮ ತಕರಾರಿಲ್ಲ, ಆದರೆ 40% ಕಮಿಷನ್ ಆರೋಪ ಹೊತ್ತಿರುವ ಸರ್ಕಾರವನ್ನು ಬೆಂಬಲಿಸುವುದು ಸೂಕ್ತವೇ? ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು
ಸುದೀಪ್ ರಾಜ್ಯಕ್ಕೆ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಯಾರಿಗೆ ಬೆಂಬಲ ಕೊಡಲು ಅವರು ಸರ್ವ ಸ್ವತಂತ್ರರು. ಕನ್ನಡ ಅಸ್ಮಿತೆಯ ಬಗ್ಗೆ ಸದಾ ಮುಂಚೂಣಿಯಲ್ಲಿ ನಿಂತು ಮಾತನಾಡುತ್ತಾರೆ. ಈಗಲೂ ಜನರ ಪರವಾಗಿ ನಿಲ್ಲಬೇಕು ಎಂದರು.
ಯಾವಾಗ 300 ದಿನ ವಾಲ್ಮೀಕಿ ಸಮಾಜದ ಸ್ವಾಮೀಜಿ ಮೀಸಲಾತಿ ಸಂಬಂಧ ಧರಣಿ ನಡೆಸಿದ್ದರಲ್ಲ ಆವಾಗ ಬಂದು ನೈತಿಕತೆ ಬೆಂಬಲ ಕೊಟ್ಟಿದ್ದರೆ, ಇದೇ ಬೊಮ್ಮಾಯಿ ಮಾಮ ಅವರು ಮೀಸಲಾತಿ ಆವಾಗಲೇ ಮಾಡಿಸ್ತಾ ಇದ್ದರಲ್ಲಾ?. ಸಮಾಜದ ಸ್ವಾಮಿ ಬಿಸಿಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಿದಾಗ ಸುದೀಪ್ ಬಂದು ನಾನು ನಿಮ್ಮ ಜೊತೆ ಇದ್ದೇನೆ. ಬೊಮ್ಮಾಯಿ ಮಾಮ ಜೊತೆ ಮಾತನಾಡುತ್ತೇನೆ ಎಂದು ಹೇಳಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ಸುದೀಪ್ ಚಿತ್ರಗಳಿಗೆ ನಿರ್ಬಂಧ ಹೇರಿ ಅನ್ನುವುದು ಸರಿಯಲ್ಲ. ಹಲವರಿಗೆ ಸಿನಿಮಾದಲ್ಲಿ ಕೆಲಸ ಕೊಟ್ಟಿರುತ್ತಾರೆ. ವಾಣಿಜ್ಯ ದೃಷ್ಟಿಕೋನದಿಂದ ಚಿತ್ರ ತೆಗೆದಿರುತ್ತಾರೆ. ಅದನ್ನು ಬ್ಯಾನ್ ಮಾಡಿ ಅನ್ನೋದು ಸರಿಯಲ್ಲ ಎಂದು ಇದೇ ವೇಳೆ ತಿಳಿಸಿದರು. ಹಾಗೆಯೇ ಅದು ಸರಿಯಾದ ಕ್ರಮವೂ ಅಲ್ಲ. ಆದರೆ ರಾಜಕೀಯ ಪಕ್ಷದ ವಿಚಾರ ಇದ್ದರೆ ನಿಷೇಧಿಸಬೇಕಾಗುತ್ತೆ. ಚುನಾವಣಾ ನಿಯಮಗಳಲ್ಲೇ ಅದು ಇರುತ್ತದೆ. ಅವರ ಸಿನಿಮಾಗಳನ್ನು ನಿರ್ಬಂಧಿಸುವುದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ತಿಳಿಸಿದರು.
ಅಮೂಲ್ ಕರ್ನಾಟಕದ ಮಾರ್ಕೆಟ್ ಪ್ರವೇಶ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಫ್ರೀ ಮಾರ್ಕೆಟ್ ನಲ್ಲಿ ಪೈಪೋಟಿ ಮಾಡಬಾರದು ಎಂದು ಹೇಳುತ್ತಿಲ್ಲ. ಆದರೆ ಸಹಕಾರಿ ತತ್ವದಲ್ಲಿ ಅಲಿಖಿತ ನಿಯಮ ಅಥವಾ ಹೊಂದಾಣಿಕೆ ಇರುತ್ತದೆ. ಆದರೆ ಅಮೂಲ್ ಜೊತೆಗೆ ಕೆಎಂಎಫ್ ವಿಲೀನ ಮಾಡುವ ಪ್ರಯತ್ನವೇ ನಡೆದಿತ್ತು. ಇದೆಲ್ಲವನ್ನೂ ಗಮನಿಸಿದರೆ ಕನ್ನಡಿಗರ ಅಸ್ಮಿತೆಯನ್ನು ಮುಗಿಸುವ ಸಂಚನ್ನು ಬಿಜೆಪಿ ನಾಯಕರು ನಡೆಯುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ಶಾಸಕರು, ಸಂಸದರು ಮೂಕಪ್ರೇಕ್ಷಕರಾಗಿದ್ದಾರೆ ಎಂದು ಆರೋಪಿಸಿಸಿದರು.