ಶಾಕ್ ಕೊಟ್ಟ ಕೋರ್ಟ್, ಧಾರವಾಡಕ್ಕೆ ವಿನಯ್ ಕುಲಕರ್ಣಿಗೆ ಎಂಟ್ರಿ ಇಲ್ಲ, | JANATA NEWS

ಧಾರವಾಡ : ಬಿಜೆಪಿ ಮುಖಂಡ ಹಾಗೂ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿಗೆ ನ್ಯಾಯಾಲಯ ಚುನಾವಣಾ ಪ್ರಚಾರಕ್ಕೆ ಹೋಗಲು ಅನುಮತಿ ನಿರಾಕರಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಧಾರವಾಡ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಪ್ರಚಾರ ಕಾರ್ಯಕ್ಕಾಗಿ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 15 ರಂದು ವಿನಯ್ ಕುಲಕರ್ಣಿ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣ ಮಾಡಿದ್ದ ಕೋರ್ಟ್ ಏಪ್ರಿಲ್ 18ಕ್ಕೆ ತೀರ್ಪು ಕಾಯ್ದಿರಿಸಿತ್ತು.
ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ 120 ಸಾಕ್ಷಿಗಳ ಪೈಕಿ ಧಾರವಾಡದಲ್ಲಿ 90 ಸಾಕ್ಷಿಗಳಿದ್ದಾರೆ. ಒಂದು ವೇಳೆ ವಿನಯ್ ಕಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದರೆ ಸಾಕ್ಷಿಗಳಿಗೆ ತೊಂದರೆಯಾಗಬಹುದು.ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಸಿಬಿಐ ವಾದಿಸಿತ್ತು. ಕೋರ್ಟ್ ಸಿಬಿಐ ವಾದಕ್ಕೆ ಮನ್ನಣೆ ನೀಡಿದ್ದು ಕುಲಕರ್ಣಿ ಅರ್ಜಿಯನ್ನು ವಜಾ ಮಾಡಿದೆ.
ವಿನಯ್ ಕುಲಕರ್ಣಿ ಈಗ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡದ ಕಾರಣ ಕಾಂಗ್ರೆಸ್ ಮುಂದೆ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.