ನಂಗೆ ಟಿಕೆಟ್ ಕೈತಪ್ಪಲು ಕಾರಣ ಬಿ.ಎಲ್. ಸಂತೋಷ್: ಜಗದೀಶ್ ಶೆಟ್ಟರ್ | JANATA NEWS

ಹುಬ್ಬಳ್ಳಿ : ನನಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಲು ಕಾರಣ ಬಿ.ಎಲ್.ಸಂತೋಷ್ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ನನಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೈ ತಪ್ಪಲು ಕಾರಣ ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ. ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ನಡೆಸಿತು. ಅವರ ಟೀಂ ಕೂಡ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತು ಎಂದು ಅವರು ಹೇಳಿದರು.
ಬಿಜೆಪಿಯ ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರು ಇತ್ತು ಅನ್ನೋದು ಗೊತ್ತಿದೆ. ಆದರೆ, ಹೈಕಮಾಂಡ್ ಲೇವಲ್ನಲ್ಲಿ ಏನಾಯ್ತೋ ನನಗೆ ಗೊತ್ತಿಲ್ಲ. ನಾನು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ತೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಮೇಲೆ ಪಕ್ಷಕ್ಕೆ ಅಷ್ಟು ಗೌರವವಿದ್ದರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಬಹುದಿತ್ತು ಅಥವಾ ಕೇಂದ್ರಕ್ಕೆ ತೆಗೆದುಕೊಳ್ಳಬಹುದಾಗಿತ್ತು. ಆದರೆ, ಬಿ.ಎಲ್ ಸಂತೋಷ್ ಅವರಿಗೆ ನನ್ನ ಮೇಲೆ ಕಣ್ಣಿತ್ತು. ನನ್ನನ್ನು ಪದೇ ಪದೇ ಅವಮಾನಿಸಿದರು. ಅಪಪ್ರಚಾರ ನಡೆಸಿದರು. ಕಡೆಗೆ ಟಿಕೆಟ್ ಕೊಡದೇ ಸತಾಯಿಸಿದರು ಎಂದು ಆರೋಪಿಸಿದ್ದಾರೆ.
ಮೊದಲ ಪಟ್ಟಿ ಬಿಡುಗಡೆಗೆ ಮೂರು ದಿನ ಮುನ್ನ ನನಗೆ ಧರ್ಮೇಂದ್ರ ಪ್ರಧಾನ್ ದೂರವಾಣಿ ಕರೆ ಮಾಡಿದರು. ನಿಮಗೆ ಈ ಬಾರಿ ಟಿಕೆಟ್ ನೀಡುತ್ತಿಲ್ಲ. ಅದಕ್ಕೆ ಅಪ್ಪಣೆ ಪತ್ರವನ್ನು ಕಳುಹಿಸುತ್ತೇವೆ, ಸಹಿ ಮಾಡಿ ಕಳುಹಿಸಿ ಎಂದು ಹೇಳಿ ಫೋನ್ ಇಟ್ಟರು. ಕೇವಲ ಮೂರು ಲೈನ್ನಲ್ಲಿ ಹೇಳಿ, ಟಿಕೆಟ್ ವಿಚಾರವನ್ನು ಅಲ್ಲಿಗೆ ಕೈಬಿಟ್ಟರು.
ನನ್ನನ್ನು ಕರೆಸಿ ಮಾತನಾಡಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಇನ್ನು, ನನಗೆ ಮುಖ್ಯಮಂತ್ರಿ ಅಧಿಕಾರ ಕೊಟ್ಟಿದ್ದಕ್ಕೆ ನಾನು ಬಿಜೆಪಿಗೆ ಧನ್ಯವಾದ ಅರ್ಪಿಸುತ್ತೇನೆ. ಆದರೆ, 10 ತಿಂಗಳ ಕಾಲವಷ್ಟೇ ಅಧಿಕಾರ ಕೊಟ್ಟಿದ್ದು. ನನಗಿಂತಲೂ ಕಿರಿಯರಾದ ಬೊಮ್ಮಾಯಿಯವರಿಗೆ ಈಗಾಗಲೇ ಸುಮಾರು 2 ವರ್ಷಗಳಿಂದ ಸಿಎಂ ಪದವಿ ಕೊಟ್ಟಿದ್ದೀರಲ್ಲವೇ? ನನಗೆ ಅದಕ್ಕಿಂತಲೂ ಕಡಿಮೆ ಅವಧಿಗೆ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇಷ್ಟಕ್ಕೆಲ್ಲ ಕಾರಣ ಬಿಎಲ್. ಸಂತೋಷ್. ಬಿ.ಎಲ್.ಸಂತೋಷ್ ಅವರು ತಮ್ಮ ಮಾನಸ ಪುತ್ರನಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ನನಗೆ ಟಿಕೆಟ್ ಕೊಡಲಿಲ್ಲ ಎಂದು ಗಂಭೀರವಾದ ಆರೋಪ ಮಾಡಿದರು.