ಈಶ್ವರಪ್ಪಗೆ ಕರೆ ಮಾಡಿದ ಪ್ರಧಾನಮಂತ್ರಿ ಮೋದಿ, ಪಕ್ಷ ನಿಷ್ಠೆಗೆ ಭಾರಿ ಮೆಚ್ಚುಗೆ! | JANATA NEWS

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಮಾಜಿ ಸಚಿವ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕೆಲ ಹಿರಿಯರಿಗೆ ಟಿಕೆಟ್ ನೀಡದೆ ಹೊಸ ಮುಖ ಪರಿಚಯ ಮಾಡಬೇಕು ಎನ್ನುವ ನಿರ್ಣಯದಿಂದ ಕೆ ಎಸ್ ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ಗೆ ಚುನಾವಣಾ ನಿವೃತ್ತಿ ಪಡೆಯುವಂತೆ ಹೈಕಮಾಂಡ್ ಸೂಚಿಸಿತ್ತು. ಅದರಂತೆ ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ.
ಇನ್ನು ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್‍ಗೆ ಟಿಕೆಟ್ ಬಯಸಿದ್ದರು. ಆದರೆ ಪುತ್ರನಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಈಶ್ವರಪ್ಪ ಅಸಮಾಧಾನಗೊಳ್ಳಬಹುದು ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಈಶ್ವರಪ್ಪ ಇದು ಯಾವುದಕ್ಕು ತಲೆ ಕೆಡಿಸಿಕೊಳ್ಳದೇ ಪಕ್ಷ ನಿಷ್ಠೆ ಮೆರೆದರು.
ಈಶ್ವರಪ್ಪ ಅವರ ಪಕ್ಷ ನಿಷ್ಠೆ ಮೆಚ್ಚಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ದೂರವಾಣಿ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಶಿವಮೊಗ್ಗ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದರು.
ನೀವು ಬಿ.ಎಸ್ ಯಡಿಯೂರಪ್ಪ ಪಕ್ಷಕ್ಕಾಗಿ ಕೆಲಸ ಮಾಡಿದ್ದೀರಿ. ಪಕ್ಷ ಸಂಘಟನೆ ನಿಮ್ಮ ಜೊತೆ ಯಾವಾಗಲೂ ಇರುತ್ತದೆ ಎಂದು ಮೋದಿ ತಿಳಿಸಿದ್ದಾರೆ ಎನ್ನಲಾಗಿದೆ, ಈಶ್ವರಪ್ಪ ಅವರು ಉತ್ತರಿಸಿ, ನೀವು ಪೋನ್ ಮಾಡಿದ್ದು ಖುಷಿ ಆಯ್ತು. ಶಿವಮೊಗ್ಗದಲ್ಲಿ ನಾವು ಗೆಲ್ಲುತ್ತೇವೆ. ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ನೀವು ಕರೆ ಮಾಡಿದ್ದು ಬಹಳ ಖುಷಿ ಆಗಿದೆ ಎಂದರು.
ಪಕ್ಷದ ಸೂಚನೆ ಪಾಲಿಸಿ ಮೋದಿ ಮೆಚ್ಚುಗೆಗೆ ಪಾತ್ರವಾಗಿರುವ ಈಶ್ವರಪ್ಪಗೆ ಹೈಕಮಾಂಡ್ ಮುಖ್ಯ ಜವಾಬ್ದಾರಿ ಅಥವಾ ಉನ್ನತ ಸ್ಥಾನಮಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.