ಖಲಿಸ್ತಾನಿ ಬೆಂಬಲಿಗ ವಾರಿಸ್-ಪಂಜಾಬ್-ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ನ ಬಂಧನ | JANATA NEWS

ಚಂಡೀಗಢ : ಖಲಿಸ್ತಾನಿ ಮತ್ತು ವಾರಿಸ್-ಪಂಜಾಬ್-ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ನನ್ನು ಇಂದು ಬೆಳಗ್ಗೆ ಪಂಜಾಬ್‌ನ ಮೊಗಾದಲ್ಲಿ ಬಂಧಿಸಲಾಗಿದೆ. ಏತನ್ಮಧ್ಯೆ, ಪಂಜಾಬ್ ಪೊಲೀಸರಿಂದ ಅಮೃತಪಾಲ್ ಸಿಂಗ್ ನ ಬಂಧನವಾಗಿಲ್ಲ ಬದಲಿಗೆ ಇದು ಶರಣಾಗತಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ.
ಪಂಜಾಬ್ ಐಜಿಪಿ ಸುಖಚೈನ್ ಸಿಂಗ್ ಗಿಲ್ ಅವರು ಅಮೃತಪಾಲ್ ಸಿಂಗ್ ಬಂಧನದ ವರೆಗಿನ ಅನುಕ್ರಮವನ್ನು ವಿವರಿಸಿದ್ದು, "...ಅಮೃತಪಾಲ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಇಂದು ಬೆಳಿಗ್ಗೆ 6.45 ರ ಸುಮಾರಿಗೆ ರೋಡ್ ಹಳ್ಳಿಯಲ್ಲಿ ಬಂಧಿಸಲಾಗಿದೆ. ಅಮೃತಸರ ಪೋಲಿಸ್ ಮತ್ತು ಪಂಜಾಬ್ ಪೋಲೀಸರ ಗುಪ್ತಚರರು ವಿಭಾಗ ಜಂಟಿ ಕಾರ್ಯಾಚರಣೆಯನ್ನು ನಡೆಸಿದರು. ಪಂಜಾಬ್ ಪೋಲೀಸರ ಕಾರ್ಯಾಚರಣೆಯ ಮಾಹಿತಿ ಆಧಾರದ ಪ್ರಕಾರ ಆತನು ರೋಡ್ ಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದನು. ಆತನು ಗುರುದ್ವಾರ ಸಾಹಿಬ್‌ನಲ್ಲಿ ಆಶ್ರಯ ಪಡೆದಿದ್ದ ಕಾರಣ, ಪವಿತ್ರತೆಯನ್ನು ಕಾಪಾಡಿಕೊಳ್ಳಲು, ಪೊಲೀಸರು ಗುರುದ್ವಾರ ಸಾಹಿಬ್‌ಗೆ ಪ್ರವೇಶಿಸಲಿಲ್ಲ. ಬಂಧನದ ಬಳಿಕ ಆತನನ್ನು ಎನ್‌ಎಸ್‌ಎ ವಶದಲ್ಲಿ ದಿಬ್ರುಗಢಕ್ಕೆ ಕರೆದೊಯ್ಯಲಾಗಿದೆ..." ಎಂದಿದ್ದಾರೆ.
ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಈ ಕುರಿತು ಟ್ವೀಟ್ ಮಾಡಿ, "ಅಮೃತ್ ಶರಣಾಗಲಿಲ್ಲ, ಆತನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ, ಅವರು ಗುರುದ್ವಾರದಲ್ಲಿ ತಲೆಮರೆಸಿಕೊಂಡಿದ್ದನು, ಪಂಜಾಬ್ ಪೊಲೀಸರು ಸುತ್ತುವರೆದಿದ್ದಾರೆ ಎಂದು ತಿಳಿದಾಗ ತನಗೆ ಈಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮನಗಂಡು ಶರಣಾಗತಿ ಭಾಷಣ ಮಾಡುವ ಮೂಲಕ ಮಹಾನ್ ಆಗಲು ಪ್ರಯತ್ನಿಸಿದ್ದಾನೆ", ಅವರು ಹೇಳಿದರು.