ಬರೀ ಮಕ್ಕಳ ತರ ಹಠ ಮಾಡ್ತಾರೆ, ಹೇಳಿದ್ದು ಕೇಳೋಲ್ಲ | JANATA NEWS

ರಾಮನಗರ : ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಡಿಸ್ಚಾರ್ಜ್ ಆಗಿದ್ದು, ಮತ್ತೆ ಚುನಾವಣಾ ಕಣದಲ್ಲಿ ನಿನ್ನೆಯಿಂದ ಓಡಾಟ ಆರಂಭ ಮಾಡಿದ್ದಾರೆ.
ಪತಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿ ಪತಿ ಪರವಾಗಿ ಮತಯಾಚನೆಗೆ ಮಾಡ್ತಿದ್ದಾರೆ. ಕುಮಾರಸ್ವಾಮಿ ರಾಜ್ಯದ ಹಲವೆಡೆ ಪ್ರಚಾರ ಮಾಡಿದ್ದರು. ಹಾಗಾಗಿ ಚನ್ನಪಟ್ಟಣದಲ್ಲಿ ಅವರ ಪರವಾಗಿ ನಾನು ಪ್ರಚಾರ ಮಾಡ್ತಿದ್ದೇನೆ. ಅವರಿಗೆ ಸ್ವಲ್ಪ ಆಯಾಸ ಆಗಿದೆ. ಅಷ್ಟೇ ಎಂದಿದ್ದಾರೆ.
ಆಯಾಸ ಹಿನ್ನೆಲೆಯಲ್ಲಿ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ಹೆಚ್ಚಿಗೆ ನೀರು ಕುಡಿಯಲ್ಲ. ಊಟದ ವಿಚಾರದಲ್ಲಿ ಮಕ್ಕಳ ರೀತಿ ಹಠ ಮಾಡ್ತಾರೆ. ಬರೀ ಮೊಸರನ್ನ ತಿಂತಾರೆ, ಸರಿಯಾಗಿ ಊಟ ಮಾಡಲ್ಲ. ಹಾಗಾಗಿ ಅನಾರೋಗ್ಯ ಆಗಿತ್ತು ಈಗ ಚೇತರಿಸಿಕೊಂಡಿದ್ದಾರೆ ಎಂದಿದ್ದಾರೆ.
ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ದೇಶದ ಪ್ರಧಾನಿ, ಅವರ ಮೇಲೆ ಗೌರವ ಇದೆ. ಅವರು ಪ್ರಚಾರ ಮಾಡಿದರೂ ಜನತೆಗೆ ಎಲ್ಲಾ ಗೊತ್ತಿದೆ. ಅವರು ಯಾರನ್ನು ಆಯ್ಕೆ ಮಾಡಬೇಕೆಂಬುದನ್ನ ಅರ್ಥ ಮಾಡಿಕೊಂಡಿದ್ದಾರೆ. ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಬರುತ್ತಿರುವುದಕ್ಕೆ ನಾವು ಸ್ವಾಗತ ಮಾಡುತ್ತೇವೆ ಎಂದರು.