ಕಾಂಗ್ರೆಸ್‌ನವರಿಗೆ ಹಿಂದೆ ಶ್ರೀರಾಮನನ್ನು ಕಂಡರೂ ಆಗುತ್ತಿರಲಿಲ್ಲ, ಈಗ ಹನುಮಂತನ ಕಂಡರೂ ಆಗುತ್ತಿಲ್ಲ! | JANATA NEWS

ವಿಜಯನಗರ : ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪರೋಕ್ಷವಾಗಿ ಬಜರಂಗದಳ ನಿಷೇಧ ಪ್ರಸ್ತಾಪಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಟಾಂಗ್ ನೀಡಿದ್ದಾರೆ.
ಹೊಸಪೇಟೆ ಬಿಜೆಪಿ ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ಎಂದಿನಂತೆ ಕನ್ನಡದಲ್ಲೇ ಭಾಷಣ ಆರಂಭಿಸಿ ಮಾತನಾಡಿದ ಅವರು, ಹನುಮಂತನ ಜನ್ಮಸ್ಥಾನಕ್ಕೆ ನಾನು ಬಂದಿದ್ದೇನೆ. ನಾನು ಹನುಮಂತನಿಗೆ ಶತ ಪ್ರಣಾಮ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗಬಲಿ ಅಂದರೆ ಹನುಮಂತನನ್ನು ಬೀಗ ಹಾಕಿ ಬಂಧಿಸಲು ಹೊರಟಿದ್ದಾರೆ.
ಕಾಂಗ್ರೆಸ್‌ನವರಿಗೆ ಹಿಂದೆ ಶ್ರೀರಾಮನನ್ನು ಕಂಡರೂ ಆಗುತ್ತಿರಲಿಲ್ಲ. ಈಗ ಹನುಮಂತನ ಕಂಡರೂ ಆಗುತ್ತಿಲ್ಲ. ನಮಗೆ ಶ್ರೀರಾಮಚಂದ್ರ ಹಾಗೂ ಹನುಮಂತ ಪೂಜ್ಯರು. ಕಾಂಗ್ರೆಸ್ ಸದಾ ಶ್ರೀ ರಾಮನ ವಿಷಯದಲ್ಲಿ ರಾಜಕಾರಣ ಮಾಡುತ್ತಾ ಬಂದಿತ್ತು. ಈಗ ಜೈ ಭಜರಂಗಬಲಿ ಎನ್ನುವ ಹನುಮಾನ್ ಸೇವಕರನ್ನು ಬಂಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಈ ಪುಣ್ಯಭೂಮಿಗೆ ಕಾಂಗ್ರೆಸ್ ಮಾಡುತ್ತಿರುವ ಅವಮಾನ.
ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಈ ಸಂಕಲ್ಪಕ್ಕೆ ಹನುಮಂತನ ಆಶೀರ್ವಾದ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳುವ ಮೂಲಕ ಬಜರಂಗದಳವನ್ನು ನಿಷೇಧಿಸಲು ಮುಂದಾಗಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಭಾರತ ಅಭಿವೃದ್ದಿಯಾಗಬೇಕಾದರೆ ನಿಮ್ಮ ಒಂದು ಮತ ಬಹಳ ಅಮೂಲ್ಯವಾಗಿದೆ. ನೀವು ಈಗ ನೋಡುತ್ತಿದ್ದೀರಿ. ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರಂಟಿಗಳ ಕಂತೆ ಹಿಡಿದುಕೊಂಡು ಕುಳಿತಿದೆ. ಯಾವ ಪಕ್ಷಕ್ಕೆ ತನ್ನ ಅಸ್ತಿತ್ವದ ಬಗ್ಗೆ ಗೊತ್ತಿಲ್ಲವೋ ಆ ಪಕ್ಷ ಸುಳ್ಳಿನ ಗ್ಯಾರಂಟಿಗಳನ್ನು ಮಾತ್ರ ನೀಡುತ್ತದೆ. ಕಾಂಗ್ರೆಸ್ ಬಡತನ ಮುಕ್ತ ಆಶ್ವಾಸನೆ ನೀಡಿತು ಆದರೆ ಬಡತನ ಮುಕ್ತವಾಗಿಲ್ಲ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಕಾಂಗ್ರೆಸ್ ಬಡಜನರ, ರೈತರ ಬಗ್ಗೆ ಬಹಳ ಮಾತನಾಡುತ್ತದೆ ಆದರೆ ಅದು ಹೇಳುವುದೊಂದು ಮಾಡುವುದೊಂದು ಎಂದು ಮೋದಿ ಗುಡುಗಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಕಾಮಗಾರಿಗಳು ವಿಳಂಬವಾಗುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕಾಮಗಾರಿಗಳ ವೇಗವು ಹೆಚ್ಚಿದೆ. ಮುಂದಿನ 25 ವರ್ಷಗಳಲ್ಲಿ ಕರ್ನಾಟಕವು ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲಿದೆ.
ಬಿಜೆಪಿ ಮಾಡಿದಷ್ಟು ಅಭಿವೃದ್ಧಿಯನ್ನು ಕಾಂಗ್ರೆಸ್ ಕಲ್ಪನೆಯಲ್ಲೂ ಮಾಡಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಕೇವಲ 9 ವರ್ಷಗಳಲ್ಲಿ ಡಬಲ್ ಆಗುವಷ್ಟು ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಿದೆ. ಚಿತ್ರದುರ್ಗದಲ್ಲೂ ಮೆಡಿಕಲ್ ಕಾಲೇಜು ಆರಂಭಿಸಿರುವುದು ಇಲ್ಲಿನ ಮಕ್ಕಳು ವೈದ್ಯರಾಗಲು ನೆರವಾಗಿದೆ. ಅಲ್ಲದೇ ಉದ್ಯೋಗ ಗಳಿಸಲು ಅನುಕೂಲ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಆದಿವಾಸಿಗಳಿಗೆ ವಿವಿಧ ಯೋಜನೆ ನೀಡಿದ್ದು, ಬಂಜಾರ ಸಮುದಾಯದ ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ನಾಯಕರು ಗ್ಯಾರಂಟಿಯ ಕಂತೆ, ಕಂತೆಯನ್ನು ಹೊತ್ತು ಬಂದಿದ್ದಾರೆ. ಅವರಿಗೆ ಅವರ ಅಸ್ಥಿತ್ವದ ಗ್ಯಾರಂಟಿಯೇ ಇಲ್ಲ. ಅವರ ಭರವಸೆಗಳಿಗೆ ಯಾವ ಗ್ಯಾರಂಟಿ ಇಲ್ಲ. ಅವರ ಕೊಡುವ ಯೋಜನೆಗಳು ಬಡವರಿಗೆ ಇಲ್ಲ. ಗರೀಬಿ ಹಠಾವೋ ಅಂದ್ರು ಆದರೆ ಸಾವಿರಾರು ಬಡವರಿಂದ ಕೋಟಿ, ಕೋಟಿ ಸುಲಿಗೆ ಮಾಡಿದರು. ಕಾಂಗ್ರೆಸ್ ನಾಯಕರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ನರೇಂದ್ರ ಮೋದಿ ಕಿಡಿಕಾರಿದ್ದಾರೆ.
Euphoric atmosphere in Hosapete. Addressing a huge @BJP4Karnataka rally. https://t.co/EmntYcAWYf
— Narendra Modi (@narendramodi) May 2, 2023