ಜ್ಞಾನಜ್ಯೋತಿ ಸಭಾಂಗಣದಲ್ಲಿ ಯುವಕರಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ | JANATA NEWS

ಬೆಂಗಳೂರು : ನಗರದಲ್ಲಿ ಯಾವೊಬ್ಬ ಮತದಾರನೂ ಆಮೀಷಕ್ಕೆ ಒಳಗಾಗದೆ ಎಲ್ಲರೂ ತಪ್ಪದೆ ಮತಚಾಯಿಸುವಂತಾಗಬೇಕು, ಅದಕ್ಕೆ ಎಲ್ಲಾ ಯುವ ಸಮೂಹ ಕೈಜೋಡಿಸಬೇಕೆಂದು ಮಾನ್ಯ ಜಿಲ್ಲಾ ಚುನಾವಣಾಧಿಕಾರಿಯಾದ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ವಿದ್ಯಾರ್ಥಿಗಳಲ್ಲಿ ಕೋರಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಯುವಕರಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ ಅವರು, ಕರ್ನಾಟಕ ರಾಜ್ಯದಲ್ಲಿ ಜನಪ್ರಧಿಗಳು ನಾಗರಿಕರಿಗೆ ಸಾಕಷ್ಟು ಹತ್ತಿರವಾಗಿರುವುದರ ಜೊತೆಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದಾಗ ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಗಳಾಗಲು ಸಾಧ್ಯ ಎಂದು ಹೇಳಿದರು.
ಮೊದಲ ಬಾರಿ ಮತದಾನ ಮಾಡುವವರು ಒಮ್ಮೆ ಮಾತ್ರ ಮತದಾನ ಮಾಡದೆ ಎಲ್ಲಾ ಚುನಾವಣಾಗಳಲ್ಲೂ ತಪ್ಪದೆ ಮತ ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವಕ್ಕೆ ಹೆಚ್ಚು ಬಲ ಬರಲಿದೆ. 18 ವರ್ಷ ತುಂಬಿದ ನಂತರ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಯಾವ ರಂಗಕ್ಕೆ ಹೋಗಬೇಕು ಎಂಬುದರ ಬಗ್ಗೆ ಸ್ವಯಂ ವಿವೇಚನೆಯಿರುತ್ತದೆ. ಅದೇ ರೀತಿ ನಿಮ್ಮ ವಿಧಾಸಭಾ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಬರಬೇಕೆಂಬುದನ್ನೂ ಕೂಡಾ ನೀವು ವಿವೇಚನೆಯೊಂದಿಗೆ ಅರ್ಹರಿಗೆ ಮತ ಚಲಾಯಿಸಬೇಕೆಂದು ತಿಳಿಸಿದರು.
ವಿಶೇಷ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಮಾತನಾಡಿ, ಪ್ರಜಾಪ್ರಭುತ್ವ ಉಳಿಯಬೇಕಾದರೆ, ಪ್ರಜಾಪ್ರಭುತ್ವದ ಆಶಯಗಳು ಸಂಪೂರ್ಣವಾಗಬೇಕಾದರೆ ಪ್ರತಿಯೊಬ್ಬ ಮತದಾರನೂ ತಪ್ಪದೆ ಮತ ಚಾಲಾಯಿಸಬೇಕು ಎಂದು ಹೇಳಿದರು.
ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ನಾವೆಲ್ಲರೂ ಹೆಚ್ಚು-ಹೆಚ್ಚು ಜಾಗೃತರಾಗಿರಬೇಕು. ಆಗ ಪ್ರಜಾಪ್ರಭುತ್ವದ ಸಂಪೂರ್ಣ ಬಲ ನಮಗೆ ಸಿಗಲಿದೆ. ಆದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಿ ಮತದಾನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಎಲ್ಲಾ ವಿದ್ಯಾರ್ಥಿಗಳಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಮತದಾರರಲ್ಲಿ ನೃತ್ಯದ ಮೂಲಕ ಜಾಗೃತಿ ಮೂಡಿಸುತ್ತಿರುವ ಶಾಲಾ ವಿದ್ಯಾರ್ಥಿಗಳು ಇಂದು ಚುನಾವಣಾ ಧ್ಯೇಯ ಹಾಡು ಮೇ ಭಾರತ್ ಹೂ ಹಾಡಿಗೆ ನೃತ್ಯ ಮಾಡಿದರು. 3000ಕ್ಕೂ ಹೆಚ್ಚು ಮೊದಲ ಬಾರಿಗೆ ಮತದಾನ ಮಾಡುವ ಕಾಲೇಜು ವಿದ್ಯಾರ್ಥಿಗಳು, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡು ಮತದಾರರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ಚುನಾವಣಾ ರಾಯಭಾರಿಯಾದ ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.