ವಿಜಯಪುರದಲ್ಲಿ ಮತಯಂತ್ರಗಳ ಒಡೆದು ಅಧಿಕಾರಿ ಮೇಲೆ ಹಲ್ಲೆ ಪ್ರಕರಣ: 25 ಆರೋಪಿಗಳು ಅರೆಸ್ಟ್! | JANATA NEWS

ವಿಜಯಪುರ : ಮಸಬಿನಾಳ ಗ್ರಾಮದಲ್ಲಿ ಹೆಚ್ಚುವರಿ ಮತಯಂತ್ರಗಳನ್ನು ಸಾಗಿಸುತ್ತಿದ್ದಾಗ ತಪ್ಪು ಕಲ್ಪನೆಯಿಂದ ಅಧಿಕಾರಿ ಮೇಲೆ ದಾಳಿ ನಡೆಸಿ, ಮತಯಂತ್ರ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 25-30 ಜನರನ್ನು ಬಂಧಿಸಲಾಗಿದೆ.
ವೋಟಿಂಗ್ ಸಮಯದಲ್ಲಿ ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದಾರೆ ಎಂದು ಭಾವಿಸಿದ ಗ್ರಾಮಸ್ಥರು ರೊಚ್ಚಿಗೆದ್ದ ಘಟನೆ ಬಸವನಬಾಗೇವಾಡಿ ಕ್ಷೇತ್ರದ ಮಸಬನಾಳ ಗ್ರಾಮದಲ್ಲಿ ನಡೆದಿತ್ತು.
ಗ್ರಾಮಸ್ಥರು ಕಾಯ್ದಿರಿಸಿದ್ದ EVM ಮಷಿನ್ ಹಾಗೂ ವಿವಿಪ್ಯಾಟ್‌ಗಳನ್ನ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಹೋಗುವಾಗ ಈ ಕೃತ್ಯ ನಡೆದಿತ್ತು.
ಮತಯಂತ್ರ ಹಾನಿ, ಸೆಕ್ಟರ್ ಅಧಿಕಾರಿ ಮೇಲೆ ದಾಳಿ, ವಾಹನ ಜಖಂ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಮನಗೂಳಿ ಠಾಣೆ ಪೊಲೀಸರಿಗೆ ದೂರು ನೀಡುವಂತೆ ಚುನಾವಣಾ ಅಧಿಕಾರಿಗಳು ಸೆಕ್ಟರ್ ಅಧಿಕಾರಿಗೆ ಸೂಚಿಸಿದ್ದಾರೆ.
ಘಟನೆ ಬಳಿಕ ಮಸಬಿನಾಳ ಗ್ರಾಮಕ್ಕೆ ಹೆಚ್ಚುವರಿ ಪೊಲೀಸರನ್ನು ರವಾನಿಸಲಾಗಿದೆ. ಮತದಾನ ಪ್ರಕ್ರಿಯೆ ಮುಂದುವರೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 25-30 ಜನರನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮಸ್ಥರು ಇವಿಎಂ, ವಿವಿಪ್ಯಾಟ್‌ಗಳು ಹಾಗೂ ಕಾರನ್ನು ಹಾನಿಗೊಳಿಸಿದ್ದಾರೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಗೆ ತೆಗೆದುಕೊಂಡರೆ ಕ್ರಮ ಫಿಕ್ಸ್ ಎಂದು ಎಸ್‌ಪಿ ಹೆಚ್‌ಡಿ ಆನಂದ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.