ಸೈಕ್ಲೋನ್ ಎಫೆಕ್ಟ್, ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರೀ ಮಳೆ | JANATA NEWS

ಬೆಂಗಳೂರು : ಸೈಕ್ಲೋನ್ ಪರಿಣಾಮ ರಾಜ್ಯದಲ್ಲಿ ಮುಂದಿನ ಎರಡು ದಿನ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ 'ಮೋಚಾ' ಚಂಡಮಾರುತ ಇಂದು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತದ ಪರಿಣಾಮ ಹಲವು ರಾಜ್ಯಗಳಲ್ಲಿ ಕಂಡುಬರಲಿದ್ದು, ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತ ಒಡಿಶಾ, ಬಂಗಾಳ ಮತ್ತು ಅಂಡಮಾನ್-ನಿಕೋಬಾರ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಆದ್ದರಿಂದ ಇಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಪಶ್ಚಿಮ ಬಂಗಾಳಕೊಲ್ಲಿಯ 'ಮೋಚಾ' ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದ್ದು, ಮೇ 13ರಂದು ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಭಾಗದಲ್ಲೂ ಮಳೆ, ದಕ್ಷಿಣ ಒಳನಾಡಿನ ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ರಾಮನಗರ, ಚಾಮರಾಜನಗರ, ತುಮಕೂರಿನಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ ಮುಂದಿನ 24 ಗಂಟೆ ತುಸು ಜೋರಾಗಿ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.