ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ, ಕಂಗೆಟ್ಟು ದೂರಹೋಗುವ ಜಾಯಮಾನವಲ್ಲ! | JANATA NEWS

ಬೆಂಗಳೂರು : ರಾಮನಗರ ವಿಧಾನ ಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸುವಂತಾಗಿದೆ. ಈ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ನಿಖಿಲ್, 'ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ' ಎಂದಿದ್ದಾರೆ.
ನಿಖಿಲ್ ವಿರುದ್ಧ ಕಾಂಗ್ರೆಸ್‌ನ ಎಚ್‌ಎ ಇಕ್ಬಾಲ್ ಹುಸೇನ್ 10,715 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ನಿಖಿಲ್‌ಗೆ ಇದು 2ನೇ ಸೋಲು. ಮಂಡ್ಯ ಲೋಕಸಭಾ ಚುನಾವಣೆಗೆ ನಿಂತಿದ್ದ ನಿಖಿಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋಲು ಅನುಭವಿಸಿದ್ದರು. ಇದೀಗ ವಿಧಾನಸಭೆ ಪ್ರವೇಶಿಸಲು ಯತ್ನಿಸಿ ಇಲ್ಲೂ ಸೋತಿದ್ದಾರೆ.
ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಬೆಂಬಲಿಸಿ ಆಶೀರ್ವದಿಸಿದ ರಾಮನಗರ ಮಹಾಜನತೆಗೆ ಶಿರಸಾಷ್ಟಾಂಗ ನಮನಗಳು ಎಂದು ಹೇಳಿದ್ದಾರೆ.
ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು. ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜತೆಯಲ್ಲೇ ಇರುತ್ತೇನೆ, ನಿಮಗಾಗಿ ಜೀವಿಸುತ್ತೇನೆ. ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ' ಎಂದು ಬರೆದುಕೊಂಡಿದ್ದಾರೆ.