ದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ : ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚಿದ ತಳಮಳ | JANATA NEWS

ನವದೆಹಲಿ : ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ನಡುವಿನ ಹಗ್ಗ ಜಗ್ಗಾಟದ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸಕ್ಕೆ ತೆರಳಿ ಅವರೊಂದಿಗೆ ಮುಚ್ಚಿದ ಬಾಗಿಲಿನ ಸಭೆ ನಡೆಸಿದರು.
ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ.ಶಿವಕುಮಾರ್ ಅವರು ಪಕ್ಷದ ಘೋಷಣೆಗೂ ಮುನ್ನವೇ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಲು ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದರಿಂದ ತೀವ್ರ ಕುತೂಹಲಕರ ಚರ್ಚೆಗಳು ಮುಂದುವರಿದಿವೆ.
ದೆಹಲಿಗೆ ಆಗಮಿಸಿದ ಶಿವಕುಮಾರ್ ಅವರು ಕಾಂಗ್ರೆಸ್ ಸಂಸದರೂ ಆಗಿರುವ ತಮ್ಮ ಸಹೋದರ ಡಿಕೆ.ಸುರೇಶ್ ಅವರ ಕಚೇರಿಗೆ ಆಗಮಿಸಿದರು.
ಸಿಎಂ ಸ್ಥಾನದ ಇಬ್ಬರು ಆಕಾಂಕ್ಷಿಗಳಾಗಿರುವ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಇಬ್ಬರೂ ಇದೀಗ ರಾಜಧಾನಿ ತಲುಪಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಪ್ರತಿಷ್ಠಿತ ಹುದ್ದೆಗಾಗಿ ಲಾಬಿ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ರಚನೆಯ ಕುರಿತು ಕಾಂಗ್ರೆಸ್‌ನ ಉನ್ನತ ನಾಯಕರೊಂದಿಗೆ ಅವರು ದಿನದ ಕೊನೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಬೆಳಿಗ್ಗೆ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಉಪಸ್ಥಿತರಿದ್ದರು.