ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ರಾಜ್ಯ ಆಗಿ ಬದಲಾವಣೆ ಆಗುತ್ತಿದೆ | JANATA NEWS

ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ರಾಜ್ಯ ಆಗಿ ಬದಲಾವಣೆ ಆಗುತ್ತಿದೆ. ದೇಶದ್ರೋಹಿಗಳು ಪಾಕಿಸ್ತಾನ ಕ್ಕೆ ಜೈ ಎನ್ನುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಹಲವು ಕಡೆ ಗೂಂಡಾಗಿರಿ ನಡೆಯುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹೊಸಕೋಟೆ ಕ್ಷೇತ್ರದ ಡಿ ಶೆಟ್ಟಹಳ್ಳಿಯಲ್ಲಿ ಮೃತ ಕೃಷ್ಣಪ್ಪರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಿಜೆಪಿ ಪಕ್ಷದ ಮುಖಂಡರು ಅವರ ಮನೆಗೆ ಭೇಟಿ ನೀಡಿದರು. ಆಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೋತ್ಸವ ನೆಪದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಪಟಾಕಿ ಸಿಡಿಸಬೇಡಿ ಎಂದಿದ್ದಕ್ಕೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ದಾಳಿಯಾಗಿದೆ. ಹೊಸಕೋಟೆ ಕ್ಷೇತ್ರದ ಡಿ ಶೆಟ್ಟಹಳ್ಳಿ ವಾಸಿ ಕೃಷ್ಣಪ್ಪ ಮತ್ತು ಮಗ ಬಾಬು ಮೇಲೆ ದಾಳಿಯಾಗಿದ್ದು, ಘಟನೆಯಲ್ಲಿ ಕೃಷ್ಣಪ್ಪ ಸಾವನ್ನಪ್ಪಿದ್ದಾರೆ. ಅವರ ಮಗ ಬಾಬು ಸ್ಥಿತಿ ಗಂಭೀರವಾಗಿದೆ ಎಂದರು.
ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ನವರು ಗೂಂಡಾಗಿರಿ ರಾಜಕಾರಣ ಪ್ರಾರಂಭಿಸಿದ್ದಾರೆ. ದ್ವೇಷ ರಾಜಕಾರಣ ಶುರುವಾಗಿದೆ. ಹೊಸಕೋಟೆಯನ್ನು ಮಿನಿ ಬಿಹಾರ ಮಾಡುವ ಕೆಲಸ ನಡೆಯುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹಲ್ಲೆಗಳು, ಕೊಲೆಗಳು, ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸುತ್ತೆವೆ. ಪೊಲೀಸರು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು. ಪೊಲೀಸರು ಖಾಕಿ ಹಾಕಿದ್ದಾರಾ ಅಥವಾ ಕಾಂಗ್ರೆಸ್ ಬಟ್ಟೆ ಹಾಕಿದ್ದಾರಾ. ಕಾಂಗ್ರೆಸ್ಸಿಗರು ಅಧಿಕಾರದ ಹಗ್ಗ ಜಗ್ಗಾಟದಲ್ಲಿ ಜನರ ಹಿತ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.