ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ: ಮುಂದಿನ ಕ್ಯಾಬಿನೆಟ್‌ನಲ್ಲಿ ಆದೇಶ | JANATA NEWS

ಬೆಂಗಳೂರು : ಚುನಾವಣಾ ಸಂದರ್ಭದಲ್ಲಿ ಘೋಷಿಸಿದಂತೆ, ಸರ್ಕಾರಕ್ಕೆ ಹೆಚ್ಚುವರಿ ಸಾಲದ ಹೊರೆಯಾಗದಂತೆ ಎಲ್ಲಾ ಐದು ಗ್ಯಾರಂಟಿ ಘೋಷಣೆಗಳನ್ನು ಜಾರಿ ಮಾಡುತ್ತಿದ್ದೇವೆ. ಇಂದು ತಾತ್ವಿಕ ಒಪ್ಪಿಗೆ ಸಿಕ್ಕಿದೆ, ಮುಂದಿನ ಕ್ಯಾಬಿನೆಟ್ ಸಭೆಯ ಬಳಿಕ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಂಪುಟ ಸಭೆ ನಡೆಸಿದರು.
ಮೊದಲ ಕ್ಯಾಬಿನೆಟ್ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಿಗೆ ಹೇಳಿದ್ದಂತೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಜಾರಿಗೆ ತಂದಿದ್ದೇವೆ. ಹಿಂದೆಯೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.
ಕಾಂಗ್ರೆಸ್ ಭರವಸೆ ನೀಡಿದ ಎಲ್ಲಾ ಐದು ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. ಮುಂದಿನ ಸಚಿವ ಸಂಪುಟ ಸಭೆ ನಂತರ ಇದನ್ನು ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಐದು ಗ್ಯಾರಂಟಿ ಯೋಜನೆ ಈಡೇರಿಕೆಗೆ ರಾಜ್ಯದಲ್ಲಿ ಒಂದು ಲೆಕ್ಕಾಚಾರದ ಪ್ರಕಾರ 50 ಸಾವಿರ ಕೋಟಿ ರೂ ಬೇಕಾಗುತ್ತದೆ. ಪ್ರಣಾಳಿಕೆಯಲ್ಲಿ ಇನ್ನೂ ಹಲವು ಭರವಸೆ ನೀಡಿದ್ದೆವು. ಇವೆಲ್ಲವೂ ಒಂದೇ ವರ್ಷದಲ್ಲಿ ಇಡೇರಿಸುವುದಲ್ಲ. ಐದು ವರ್ಷದ ಅವಧಿಯಲ್ಲಿ ಈಡೇರಿಕೆ ಮಾಡುವಂತದ್ದು ಎಂದರು.
ಮುಂದಿನ ಕ್ಯಾಬಿನೆಟ್ ಯಾವಾಗ ನಡೆಯಲಿದೆ ಎಂದು ಕೇಳಿದ್ದಕ್ಕೆ, ಮುಂದಿನ ವಾರವೇ ನಡೆಯಲಿದೆ. ಮೇ 22-24ರ ವರೆಗೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯಲಾಗಿದ್ದು, ರಾಜ್ಯಪಾಲರಿಂದ ಹಂಗಾಮಿ ಸ್ಪೀಕರ್ ನೇಮಕ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಆರ್.ವಿ.ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗುವ ಸಾಧ್ಯತೆ ಇದೆ ಎಂದು ಸಿಎಂ ಹೇಳಿದ್ದಾರೆ.
ಗೃಹ ಜ್ಯೋತಿ
ಈ ಯೋಜನೆಯು ರಾಜ್ಯದ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಖಾತರಿಪಡಿಸುತ್ತದೆ.
ಗೃಹ ಲಕ್ಷ್ಮಿ
ಈ ಯೋಜನೆಯು ಮನೆಯ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 2,000 ರೂ ನೀಡುವುದನ್ನು ಖಾತರಿಪಡಿಸುತ್ತದೆ.
ಅನ್ನ ಭಾಗ್ಯ
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡ್ ಹೊಂದಿರುವವರಿಗೆ ತಿಂಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡಲಾಗುವುದು.
ಯುವ ನಿಧಿ
ಈ ಯೋಜನೆಯು ಪದವೀಧರ ನಿರುದ್ಯೋಗಿ ಯುವಕರಿಗೆ ರೂ 3,000 ಮತ್ತು ಈ ವರ್ಷದ ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ರೂ 1,500 ಗರಿಷ್ಠ ಎರಡು ವರ್ಷಗಳವರೆಗೆ ಭರವಸೆ ನೀಡುತ್ತದೆ.
ಸಾಕ್ಷಿ ಯೋಜನೆ
ಇದು ಕರ್ನಾಟಕದ ಮಹಿಳೆಯರಿಗೆ ರಾಜ್ಯಾದ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸ್‌ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.