ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರದೆ ಕುಂಟು ನೆಪ ಹೇಳುತ್ತಿದ್ದಾರೆ- ಬೊಮ್ಮಾಯಿ | JANATA NEWS

ಬೆಂಗಳೂರು : ಕಾಂಗ್ರೆಸ್ ನೂತನ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರದೆ ಕುಂಟು ನೆಪ ಹೇಳುತ್ತಿದ್ದಾರೆ, ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಟುವಾಗಿ ಟೀಕಿಸಿದ್ದು, ಸುವಿಸ್ತಾರವಾಗಿ ಮಾಹಿತಿ ಹೊರಹಾಕಿದ್ದಾರೆ.
ಈ ಕುರಿತು ಹೇಳಿರುವ ಮಾಜಿ ಸಿಎಂ ಬೊಮ್ಮಾಯಿ ಅವರು, "ಮನಸ್ಸಿದ್ದರೇ ಮಾರ್ಗ-ಮನಸ್ಸಿಲ್ಲದಿದ್ದರೇ ನೆಪ"ಕಾಂಗ್ರೆಸ್ ನ ಗೃಹಲಕ್ಷ್ಮಿ ಯೋಜನೆಯನ್ನು ಬೇಕಿದ್ದರೇ ನಾಳೆಯಿಂದಲೇ ಆರಂಭಿಸಬಹುದು.ಫಲಾನುಭವಿಗಳ ಬ್ಯಾಂಕ್ ಖಾತೆಯ ನಂಬರ್ ಇಂದ ಹಿಡಿದು ಸಂಪೂರ್ಣ ಮಾಹಿತಿ ಇಲಾಖೆಯಲ್ಲಿ ಲಭ್ಯವಿದೆ. ಆದರೇ ಫಲಾನುಭವಿಗಳ ಪಟ್ಟಿಯನ್ನು ನಾವು ಜಿಲ್ಲಾವಾರು ತರಿಸಿಕೊಳ್ಳುತ್ತೇವೆ ಎಂಬ ಕುಂಟು ನೆಪ ಹೇಳುತ್ತಿದ್ದಾರೆ.
ಇಂಧನ ಇಲಾಖೆಯಲ್ಲಿ ಸಹ ಎಲ್ಲಾ ರೀತಿಯ ಮಾಹಿತಿ ಇದೆ. ಆದರೇ ಆ ಯೋಜನೆ ಜಾರಿ ಬಗ್ಗೆ ಸಹ ಸ್ಪಷ್ಟತೆ ಇಲ್ಲ. 2022-23ನೆ ಸಾಲಿನ ಪದವಿಧರ ನಿರುದ್ಯೋಗಿಗಳಿಗೆ ನೀಡುತ್ತೇವೆ ಎಂದು ಘೋಷಿಸಿದ್ದಾರೆ. ಆದರೇ ಚುನಾವಣಾ ಪೂರ್ವದಲ್ಲಿ ಎಲ್ಲಾ ನಿರುದ್ಯೋಗಿಗಳಿಗೆ ನೀಡುತ್ತೇವೆ ಎಂದು ಹೇಳಿದ್ದರು. ಈ ಘೋಷಣೆಯಲ್ಲಿಯೂ ಸಹ ಕಾಂಗ್ರೆಸ್ ನುಡಿದಂತೆ ನಡೆದಿಲ್ಲ.
ಇದೆಲ್ಲವನ್ನೂ ಗಮನಿಸಿದರೇ ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಳವಾಗುತ್ತದೆ , ಬಸ್ ಗಳ ಓಡಾಟ ಕಡಿಮೆಯಾಗುತ್ತದೆ ಹಾಗೂ ವಿದ್ಯುಚ್ಛಕ್ತಿ ಕಡಿತವಾಗುತ್ತದೆ. ಇದಿಷ್ಟೇ ಕಾಂಗ್ರೆಸ್ ಈ ರಾಜ್ಯದ ಜನತೆಗೆ ನೀಡುವ ಗ್ಯಾರಂಟಿ ಗಳಾಗುತ್ತವೆ.
ಸಿದ್ದರಾಮಯ್ಯನವರು 2013ರಲ್ಲಿ ಅಧಿಕಾರ ಸ್ವೀಕರಿಸುವ ಮುನ್ನ, ಈ ಹಿಂದೆ 70 ವರ್ಷ ರಾಜ್ಯವನ್ನು ಆಳಿದ ಎಲ್ಲಾ ಸರ್ಕಾರಗಳು ಸೇರಿ ಮಾಡಿದ್ದ ಒಟ್ಟು ಸಾಲ ₹1 ಲಕ್ಷ ಕೋಟಿ. ಆದರೇ ಕೋವಿಡ್, ಅತಿವೃಷ್ಟಿ, ಅನಾವೃಷ್ಟಿ ಅಂತಹ ಯಾವುದೇ ತೊಂದರೆ ಬಾರದಿದ್ದರೂ, ತಮ್ಮ ಹಿಂದಿನ 5 ವರ್ಷ ಅವಧಿಯಲ್ಲಿ ಮಾಡಿದ ಒಟ್ಟು ಸಾಲ ₹1 ಲಕ್ಷ 43 ಸಾವಿರ ಕೋಟಿ.
ಈಗ ಹೇಳಿ ಯಾರು ಹೆಚ್ಚು ಸಾಲ ಮಾಡಿದ್ದು ಎಂಬುದನ್ನು..??
ನಮ್ಮ ಅವಧಿಯಲ್ಲಿ ₹3 ಲಕ್ಷ ಕೋಟಿಯನ್ನು ಸಾಲ ಮಾಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ನಾನು ವಿಧಾನಸಭೆಯಲ್ಲಿ ಸಹ ಉತ್ತರ ನೀಡಿದ್ದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಸಂಪೂರ್ಣ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿತ್ತು. ಹಾಗಾಗಿ ಆರ್ಥಿಕತೆಗೆ ಇಂಬು ನೀಡಲು ಕೇಂದ್ರ ಸರ್ಕಾರವೇ ಹೆಚ್ಚು ಸಾಲ ಮಾಡಲು ಅವಕಾಶ ಕಲ್ಪಿಸಿತು. ಕೇವಲ ಕರ್ನಾಟಕ ಅಲ್ಲದೇ, ದೇಶದ ಎಲ್ಲಾ ರಾಜ್ಯಗಳು ಸಹ ಸಾಲ ಮಾಡಿವೆ.
ನಾನು ಜಿ.ಎಸ್.ಟಿ ಮಂಡಳಿಯಲ್ಲಿ ಇದ್ದರೂ ಏನು ಮಾಡಲಿಲ್ಲ ಎಂಬ ಅರ್ಥದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಆದರೇ ಅವರು ಎತ್ತಿರುವ 15ನೇ ಹಣಕಾಸಿನ ಆಯೋಗಕ್ಕೂ, ಜಿ.ಎಸ್.ಟಿ ಮಂಡಳಿಗೂ ಯಾವುದೇ ಸಂಬಂಧ ಇಲ್ಲ.
ಅವರು ಪ್ರಸ್ತಾಪಿಸುವ ₹5000ಕೋಟಿ ಬಗ್ಗೆ ಸಹ ನಾನು ವಿಧಾನಸಭೆಯಲ್ಲಿ ಉತ್ತರ ನೀಡಿದ್ದೇನೆ. ಒಂದು ಸುಳ್ಳನ್ನು ಪದೇ ಪದೇ ಹೇಳಿದರೇ, ಅದು ಸತ್ಯವಾಗುವುದಿಲ್ಲ ಎಂಬುದನ್ನು ಸಿದ್ದರಾಮಯ್ಯನವರು ಅರಿತುಕೊಳ್ಳಬೇಕು. ಕೇಂದ್ರ ಸರ್ಕಾರ ಸಬರ್ಬನ್, ಮೆಟ್ರೋ, ರೈಲ್ವೇ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಯಾವ ಸರ್ಕಾರ ನೀಡದಷ್ಟು ಅನುದಾನವನ್ನು ನೀಡಿ, ಯೋಜನೆಗಳು ಈಗಾಗಲೇ ಕಾರ್ಯಾರಂಭವಾಗಿವೆ. ಆದರೇ ಸಿದ್ದರಾಮಯ್ಯ ಸುಳ್ಳನ್ನು ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಅಂಕಿ ಅಂಶಗಳೊಂದಿಗೆ ಅವರಿಗೆ ತಕ್ಕ ಉತ್ತರ ನೀಡಲು ಸಿದ್ಧನಿದ್ದೇನೆ.
ಆದಾಯವನ್ನು ಹೇಗೆ ಹೆಚ್ಚಿಸಬಹುದೆಂಬುದು ನಾನು ನೀಡಿದ ಬಜೆಟ್ ನಲ್ಲಿ ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಬಜೆಟ್ ನಲ್ಲಿ ನಿಗದಿಪಡಿಸಿದ ಗುರಿಗಿಂತ ಶೇ.16ರಷ್ಟು ಹೆಚ್ಚು ಆದಾಯವನ್ನು ನಾವು ಸಾಧಿಸಿದ್ದೇವೆ. ಕೇಂದ್ರ ಸರ್ಕಾರ ಸಹ ತನ್ನ ಪಾಲಿಗಿಂತ ಶೇ.17ರಷ್ಟು ಹೆಚ್ಚು ಅನುದಾನವನ್ನು ನೀಡಿದೆ. ಆದರೇ ಸಿದ್ದರಾಮಯ್ಯ ಅರ್ಧ ಸತ್ಯ ಹೇಳುವ ಮೂಲಕ ರಾಜ್ಯದ ಜನತೆಯ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ, ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಲು ಸಾಲು ಟ್ವೀಟ್ ಮಾಡಿದ್ದಾರೆ.