ಮುಂಗಾರು ಪೂರ್ವ ಮಳೆ ಅವಾಂತರಕ್ಕೆ ರಾಜ್ಯದಲ್ಲಿ ಇದುವರೆಗೆ 52 ಮಂದಿ ಬಲಿ, ತಲಾ 5 ಲಕ್ಷ ಪರಿಹಾರ! | JANATA NEWS

ಬೆಂಗಳೂರು : ಮುಂಗಾರು ಪೂರ್ವ ಮಳೆಗೆ ಇದುವರೆಗೆ 52 ಮಂದಿ ಬಲಿಯಾಗಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಪ್ರಕೃತಿ ವಿಕೋಪ ಸಂಬಂಧ ಮುಂಜಾಗ್ರತಾ ಕ್ರಮ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿ, ಸಿಇಒಗಳ ಜೊತೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು, ಹೊಸ ಸರ್ಕಾರ ಬಂದ ಬಳಿಕ ಜನರ ನಿರೀಕ್ಷೆ ಹೆಚ್ಚಿರುತ್ತದೆ. ಅದಕ್ಕೆ ತಕ್ಕ ಕೆಲಸ ಮಾಡಬೇಕು. ನಾನು ಕೇವಲ ಸೂಚನೆ ಕೊಡೋದಿಲ್ಲ. ಎಚ್ಚರಿಕೆ ಕೊಡ್ತಾ ಇದ್ದೇನೆ. ಸೂಚನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದಿದ್ದರೆ ಕಠಿಣ ಕ್ರಮಕ್ಕೆ ಸಿದ್ದರಾಗಿ ಎಂದರು.
ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ. ಮನೆ ಹಾನಿ ಬಗ್ಗೆ ಪರಿಶೀಲಿಸಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು 540 ಕೋಟಿ ಹಣವಿದೆ. ಅಗತ್ಯವಿದ್ದರೆ ವಿಪತ್ತು ನಿಧಿಯಡಿ ಪರಿಹಾರ ನೀಡುವುದಾಗಿ ಹೇಳಿದ್ದೇವೆ. ವಸ್ತುಸ್ಥಿತಿ ಆಧಾರದ ಮೇಲೆ ಅನುದಾನ ನೀಡಲು ಸೂಚನೆ ನೀಡಲಾಗಿದೆ ಎಂದರು.
ಅಲ್ಲದೆ, ಹಳ್ಳಿಗಳಿಗೆ ತೆರಳುವಂತೆ ಡಿಸಿ, ಸಿಇಒಗಳಿಗೆ ಸೂಚನೆ ನೀಡಿದ್ದೇವೆ. ಕಚೇರಿಯಿಂದ ಕಾರ್ಯ ನಿರ್ವಹಿಸಿದರೆ ವಸ್ತುಸ್ಥಿತಿ ಅರ್ಥವಾಗಲ್ಲ. ನೀವೇ ಖುದ್ದಾಗಿ ಭೇಟಿ ನೀಡಿದರೆ ಮನವರಿಕೆ ಆಗಲಿದೆ ಎಂದಿರುವುದಾಗಿ ತಿಳಿಸಿದರು.
ಏಪ್ರಿಲ್ಗೆ ಪ್ರಿ ಮಾನ್ಸೂನ್ ಮಳೆ ಶುರುವಾಗುತ್ತೆ. ಈ ಬಾರಿ ವಾಡಿಕೆಗಿಂತ ಶೇ.10 ರಷ್ಟು ಹೆಚ್ಚು ಮಳೆಯಾಗಿದೆ. ಈವರೆಗೆ 52 ಜನ ಸತ್ತಿದ್ದಾರೆ. 331 ಜಾನುವಾರುಗಳಿಗೆ ಜೀವಹಾನಿಯಾಗಿದೆ. ಸುಮಾರು 20,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. 814 ಮನೆ ಹಾನಿಗೊಳಗಾಗಿವೆ. ಪ್ರಾಣ ಹಾನಿ ಹಾಗೂ ಮನೆ ಹಾನಿಯಾದವರಿಗೆ ಕೂಡಲೇ ಪರಿಹಾರ ಕೊಡಲು ಸೂಚನೆ ನೀಡಲಾಗಿದೆ ಎಂದರು.