ಎಲೆಕ್ಷನ್ ಹಿಂದೂಗಳಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕರೆಲ್ಲರೂ, ಊಸರವಳ್ಳಿಯಂತೆ ಬಣ್ಣ ಬದಲಿಸಿದ್ದಾರೆ - ಬಿಜೆಪಿ | JANATA NEWS

ಬೆಂಗಳೂರು : ರಾಜ್ಯದಲ್ಲಿನ ನೂತನ ಕಾಂಗ್ರೆಸ್ ಸರ್ಕಾರ ಸಮಾಜದಲ್ಲಿ ಸೌಹಾರ್ದತೆಗೆ ಭಂಗ ತರುವ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ನೈತಿಕ ಪೊಲೀಸ್ ಗಿರಿಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಮಂಗಳವಾರ ಸಂಜೆ ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಮುಖ ಸಭೆ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿರುವ ವಿರೋಧಪಕ್ಷ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರೆಲ್ಲರೂ, ಊಸರವಳ್ಳಿ ಬಣ್ಣ ಬದಲಿಸಿದಂತೆ, ಇದೀಗ ತಮ್ಮ ಮೂಲರೂಪಕ್ಕೆ ಹಿಂದಿರುಗಿದ್ದಾರೆ, ಎಂದು ತರಾಟೆ ತೆಗೆದುಕೊಂಡಿದೆ.
ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲ ಹಳದಿಯೇ! ಚುನಾವಣೆಯ ಸಂದರ್ಭದಲ್ಲಿ ಕೇಸರಿ ವಸ್ತ್ರಗಳನ್ನು ಧರಿಸಿ, ಹಣೆಯ ಮೇಲೆ ಊರಗಲದ ತಿಲಕವನ್ನು ಪ್ರದರ್ಶಿಸುತ್ತಾ ಎಲೆಕ್ಷನ್ ಹಿಂದೂ(‘Election Hindu’) ಗಳಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕರೆಲ್ಲರೂ, ಊಸರವಳ್ಳಿ ಬಣ್ಣ ಬದಲಿಸಿದಂತೆ, ಇದೀಗ ತಮ್ಮ ಮೂಲರೂಪಕ್ಕೆ ಹಿಂದಿರುಗಿದ್ದಾರೆ. ರಾಜ್ಯದಲ್ಲಿ ಬಾಂಬಿಟ್ಟ ತಮ್ಮ ಬ್ರದರ್ಸ್‌ಗಳಿಗೆ ಬಿಡುಗಡೆ ಭಾಗ್ಯ ಕರುಣಿಸಲು ಸರ್ಕಾರ ಮುಂದಾದರೂ ಯಾವುದೇ ಅಚ್ಚರಿ ಪಡಬೇಕಿಲ್ಲ!, ಎಂದು ಕರ್ನಾಟಕ ಬಿಜೆಪಿ ತಮ್ಮ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ವೇಳೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದ ಡಿಕೆ.ಶಿವಕುಮಾರ್ ಅವರು, ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು? ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡೋದಿಲ್ಲ. ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲು ಹಾಕ್ತೀರಾ ಅಂದರೆ ಹೇಗೆ? ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡ ಬರಬೇಕಾಗಿತ್ತು ಅಂತ ತರಾಟೆಗೆ ತೆಗೆದುಕೊಂಡಿದ್ದರು, ಎನ್ನಲಾಗಿದೆ.