ಕನ್ನಡ ತಾಯಿ ಭುವನೇಶ್ವರಿ ಕುರಿತಾಗಿ ಕೋಡಿ ಹೊಸಹಳ್ಳಿ ರಾಮಣ್ಣ ಮತೀಯ ಹೇಳಿಕೆ : ಕನ್ನಡ ಸಾಹಿತ್ಯ ಪರಿಷತ್ತಿನ ತೀವ್ರ ಖಂಡನೆ, ಪ್ರತಿಭಟನೆಯ ಎಚ್ಚರಿಕೆ | JANATA NEWS

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸ್ಥಾಪಿತವಾಗಿರುವ ಭುವನೇಶ್ವರಿಯ ಪ್ರತಿಮೆಯ ಕುರಿತಾಗಿ ಪೂರ್ವಗ್ರಹ ಪೀಡಿತರಾಗಿ ಹೋರಾಟಕ್ಕಿಳಿದು ಸಾರ್ವಜನಿಕವಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿರುವ ಕೋಡಿ ಹೊಸ ಹಳ್ಳಿ ರಾಮಣ್ಣನವರು ಕನ್ನಡ ತಾಯಿ ಭುವನೇಶ್ವರಿಯ ಕುರಿತಾಗಿ ನೀಡಿರುವ ಮತೀಯ ನೆಲೆಯ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸ್ಥಾಪಿತವಾಗಿರುವ ಭುವನೇಶ್ವರಿಯ ಪ್ರತಿಮೆಯ ಕುರಿತಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ಪೂರ್ವಗ್ರಹ ಪೀಡಿತರಾಗಿ ಹೋರಾಟಕ್ಕಿಳಿದು ಸಾರ್ವಜನಿಕವಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿರುವ ‘ಸಮಾನ ಮನಸ್ಕರ ವೇದಿಕೆ’ ಎಂಬ ಅನಧಿಕೃತ ಸಂಘಟನೆಯ ಜೊತೆಗೆ ಗುರುತಿಸಿ ಕೊಂಡಿರುವ ಮತ್ತು ಕನ್ನಡ ಸಂಘರ್ಷ ಸಮಿತಿಯ ಸಲಹೆಗಾರರು ಎಂದು ಹೇಳಿ ಕೊಳ್ಳುತ್ತಿರುವ ಕೋಡಿ ಹೊಸ ಹಳ್ಳಿ ರಾಮಣ್ಣನವರು ಕನ್ನಡ ತಾಯಿ ಭುವನೇಶ್ವರಿಯ ಕುರಿತಾಗಿ ನೀಡಿರುವ ಮತೀಯ ನೆಲೆಯ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ.
"ಕೋಡಿ ಹೊಸಹಳ್ಳಿ ರಾಮಣ್ಣನವರು ‘ ಸನಾತನ ಸಂಸ್ಕೃತಿಯ ಪ್ರತೀಕದಂತೆ ಇರುವ ಭುವನೇಶ್ವರಿ ಪುತ್ಥಳಿಯಿಂದ ಹಿಂದುತ್ವದ ತೆಕ್ಕೆಗೆ ಪರಿಷತ್ತನ್ನು ಒಳಪಡಿಸುವುದು ಸರಿಯಲ್ಲ’ ಮತ್ತು ‘ನಾಡದೇವತೆ, ಭುವನೇಶ್ವರಿ ಇತ್ಯಾದಿಗಳು ಭಾವನಾತ್ಮಕವೇ ಹೊರತು ಯಾವುದೇ ಸ್ವರೂಪವನ್ನು ಹೊಂದಿರುವುದಿಲ್ಲ’ ಎಂದು ಹೇಳಿ ಕನ್ನಡಿಗರ ಭಾವನೆಗಳನ್ನು ಕೆರಳಿಸಿದ್ದಾರೆ. ಆದರೆ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯೇ ಭಾವನಾತ್ಮಕ ಸಂಗತಿಗಳು ಎಂದು ಅರಿತಿಲ್ಲ ಜೊತೆಗೆ ಅವರು ಕನ್ನಡದ ತಾಯಿ ಭುವನೇಶ್ವರಿಯ ಕುರಿತಾಗಿ ಪ್ರಾಥಮಿಕ ಜ್ಞಾನವನ್ನೂ ಹೊಂದಿಲ್ಲವೆನ್ನುವುದು ಅಘಾತಕರ ಸಂಗತಿ" ಎಂದು ನಾಡೋಜ ಡಾ.ಮಹೇಶ ಜೋಶಿ ವಿಷಾದವನ್ನು ವ್ಯಕ್ತ ಪಡಿಸಿದ್ದಾರೆ.
"ಕನ್ನಡಿಗರ ಅಸ್ಮಿತೆ ಎನ್ನಿಸಿ ಕೊಂಡು ಬಂದ ಕನ್ನಡ ತಾಯಿ ಭುವನೇಶ್ವರಿಯ ಪರಿಕಲ್ಪನೆಯನ್ನು ಮತೀಯ ನೆಲೆಯಲ್ಲಿ ನೋಡಿರುವ ರಾಮಣ್ಣ ಕೋಡಿ ಹೊಸಹಳ್ಳಿಯವರು ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಹಾಗೂ ಕನ್ನಡಿಗರ ಸ್ವಾಭಿಮಾವನ್ನು ಕೆರಳಿಸಿದ್ದಾರೆ. ಕನ್ನಡ ಸಂಘರ್ಷ ಸಮಿತಿ ಎನ್ನುವ ಅವರ ಸಂಘಟನೆಯ ಹೆಸರೇ ಸೂಚಿಸುವಂತೆ ಅವರು ಕನ್ನಡವನ್ನು ಸಂಘರ್ಷದ ನೆಲೆಯಲ್ಲಿ ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಸಾಮರಸ್ಯದ ನೆಲೆಯಲ್ಲಿ ನೋಡುತ್ತದೆ. ಕನ್ನಡ ತಾಯಿ ಭುವನೇಶ್ವರಿಯ ಕುರಿತು ನೀಡಿರುವ ಮತೀಯ ಮತ್ತು ಬೇಜವಬ್ದಾರಿಯ ಹೇಳಿಕೆಯ ಕುರಿತು ಅವರು ಸಮಸ್ತ ಕನ್ನಡಿಗರ ಕ್ಷಮೆ ಕೇಳ ಬೇಕು ಇಲ್ಲದಿದ್ದರೆ ಭುವನೇಶ್ವರಿ ದೇಗುಲವಿರುವ ಸಿದ್ದಾಪುರದಿಂದ ಆರಂಭಿಸಿ ಅವರ ವಿರುದ್ಧ ನಾಡಿನ್ಯಾದ್ಯಂತ ನೈಜ ಕನ್ನಡ ಹೋರಾಟಗಾರರು, ಎಲ್ಲಾ ಕನ್ನಡಪರ ಸಂಘಟನೆಗಳು, ಸಾಹಿತಿಗಳು ಚಿಂತಕರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಇದೊಂದು ಜನಾಂದೋಲನ ಕೂಡ ಆಗಿ ಪರಿವರ್ತಿತವಾಗ ಬಹುದು", ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ ಜೋಶಿ ಎಚ್ಚರಿಸಿದ್ದಾರೆ.
"ಕನ್ನಡ ತಾಯಿ ಭುವನೇಶ್ವರಿಯ ಪರಿಕಲ್ಪನೆ ಮತ್ತು ಕನ್ನಡ ನಾಡಿನ ನಡುವೆ ಸುದೀರ್ಘವಾದ ಬಾಂಧವ್ಯವಿದೆ. ಭುವನೇಶ್ವರಿಯ ಪರಿಕಲ್ಪನೆ ರೂಪುಗೊಂಡಿದ್ದೇ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿ, ಕನ್ನಡದ ಮೊದಲ ರಾಜವಂಶವೆಂದೇ ಪ್ರಖ್ಯಾತರಾದ ಕದಂಬ ವಂಶದವರು ತಮ್ಮ ಕುಲದೈವವಾದ ಶ್ರೀ ಮಧುಕೇಶ್ವರ ಸ್ವಾಮಿಯೊಂದಿಗೆ ತಾಯಿ ಭುವನೇಶ್ವರಿಯನ್ನೂ ಕೂಡ ನಿತ್ಯವೂ ಆರಾಧಿಸುತ್ತಿದ್ದರು. ಈ ಮೂಲಕವೇ ಕನ್ನಡ ಮತ್ತು ಭುವನೇಶ್ವರಿಯ ನಡುವೆ ನಿಕಟ ಬಾಂದವ್ಯ ರೂಪಿತವಾಗಿ ಭುವನೇಶ್ವರಿ ಕನ್ನಡಿಗರ ಅಸ್ಮಿತೆ ಎನಿಸಿ ಕೊಂಡಳು ಎನ್ನುವುದನ್ನು ನಾಡೋಜ ಡಾ.ಮಹೇಶ ಜೋಶಿ ಸ್ಮರಿಸಿ ಕೊಂಡಿದ್ದಾರೆ. ಇದು ಕನ್ನಡವನ್ನು ಆಳಿದ ಎಲ್ಲಾ ರಾಜಮನೆತನಗಳಿಂದಲೂ ಮುಂದುವರೆದು ಕೊಂಡು ಬಂದಿತು", ಎಂದು ಅವರು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬೆಟ್ಟದ ಸಾಲಿನಲ್ಲಿ ಇರುವ ಭುವನಗಿರಿಯಲ್ಲಿ ಅವರು ಭುವನೇಶ್ವರಿಯ ದೇಗುಲವನ್ನು ಕಟ್ಟಿಸಿದರು. ಬಾದಾಮಿ ಚಾಲುಕ್ಯರೂ ಕೂಡ ತಮ್ಮ ಆಳ್ವಿಕೆಯಲ್ಲಿ ಭುವನೇಶ್ವರಿಯನ್ನು ನಾಡದೇವತೆ ಎಂದು ಪರಿಗಣಿಸಿದ್ದರು. ಕದಂಬರು ಕಟ್ಟಿಸಲು ಆರಂಭಿಸಿದ ಭುವನೇಶ್ವರಿ ದೇಗುಲ ಅವರ ಕಾಲದಲ್ಲಿಯೇ ಪೂರ್ಣಗೊಳ್ಳದೆ ವಿಜಯನಗರ ಮತ್ತು ಬೀಳಗಿ ಅರಸರ ಕಾಲದಲ್ಲಿಯೂ ಕೂಡ ಮುಂದುವರೆಯಿತು. ಅವರೆಲ್ಲರೂ ಭುವನೇಶ್ವರಿಯ ಅಪಾರ ಭಕ್ತಿಯನ್ನು ಹೊಂದಿದ್ದರು. ಕ್ರಿ.ಶ 1692ರಲ್ಲಿ ಬೀಳಗಿ ದೊರೆ ಬಸವೇಂದ್ರನು ಭುವನೇಶ್ವರಿಯ ದೇಗುಲ ನಿರ್ಮಾಣವನ್ನು ಪೂರ್ಣಗೊಳಿಸಿದ ದಾಖಲೆ ಇದೆ ಎಂದು ನಾಡೋಜ. ಡಾ.ಮಹೇಶ ಜೋಶಿ ಭುವನೇಶ್ವರಿಯ ಇತಿಹಾಸವನ್ನು ಸ್ಮರಿಸಿದ್ದಾರೆ.
ವಿಜಯನಗರ ಅರಸರ ಕಾಲದಲ್ಲಿಯೂ ಭುವನೇಶ್ವರಿಯ ವಿಶೇಷ ಮಹತ್ವವಿತ್ತು. ಕನ್ನಡಿಗರ ಸಾಮ್ರಾಜ್ಯವನ್ನು ಸ್ಥಾಪಿಸಲು ತಪಸ್ಸು ಮಾಡಿದ ವಿದ್ಯಾರಣ್ಯರು ಪ್ರಾರ್ಥಿಸಿದ್ದು ಭುವನೇಶ್ವರಿ ತಾಯಿಯನ್ನೇ. ಹಂಪಿಯ ವಿರೂಪಾಕ್ಷ ಮಂದಿರದಲ್ಲಿ ಭುವನೇಶ್ವರಿ ಪ್ರತಿಮೆಯನ್ನು ವಿಜಯನಗರದ ಅರಸರು ಸ್ಥಾಪಿಸಿದರು. ವಿಜಯನಗರ ಸಾಮ್ರಾಜ್ಯದ ನಂತರ ಮೈಸೂರಿನ ಒಡೆಯರು ಭುವನೇಶ್ವರಿಯ ಆರಾಧನೆಯನ್ನು ಮುಂದುವರೆಸಿದರು. ಬೆಟ್ಟದ ಚಾಮರಾಜ ಒಡೆಯರು ಕೂಡ ಭುವನೇಶ್ವರಿಯ ಭಕ್ತರಾಗಿದ್ದಕ್ಕೆ ದಾಖಲೆಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರು ಮೇಲುಕೋಟೆಯಲ್ಲಿ ಭುವನೇಶ್ವರಿ ಮಂಟಪವನ್ನು ಕಟ್ಟಿಸಿದ್ದರು. ಮೈಸೂರಿನ ಕೊನೆಯ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರು ಮೈಸೂರಿನ ಅರಮನೆಯ ಆವರಣದಲ್ಲಿ ಭುವನೇಶ್ವರಿಯ ಪ್ರತಿಮೆಯನ್ನು ಸ್ಥಾಪಿಸಿದರು.
ಲಲಿತಕಲೆಗಳಿಗೆ ಆಶ್ರಯದಾತರಾದ ಅವರು ಯಾವುದೇ ಕೃತಿ ರಚನೆಗೆ ಮೊದಲು ಭುವನೇಶ್ವರಿಯ ನೆನೆಯವ ಪದ್ದತಿಯನ್ನು ಇಟ್ಟು ಕೊಂಡಿದ್ದರು. ಅವರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ಮುತ್ತಯ್ಯ ಭಾಗವತರ್ ಅವರ ‘ಭುವನೇಶ್ವರಿಯ ನೆನೆ ಮಾನಸವೇ’ ಎಂಬ ಪ್ರಸಿದ್ಧ ಕೀರ್ತನೆಯನ್ನು ರಚಿಸಿರುವುದನ್ನು ಕಾಣುತ್ತೇವೆ.
ಕನ್ನಡದ ಕುಲಪುರೋಹಿತರು ಎನ್ನಿಸಿ ಕೊಂಡಿರುವ ಆಲೂರು ವೆಂಕಟರಾಯರು ತಮ್ಮ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ‘ಭುವನೇಶ್ವರಿ ಕನ್ನಡಿಗರ ತಾಯಿ’ ಎನ್ನುವ ಪರಿಕಲ್ಪನೆ ನೀಡಿದರು. ಅದಕ್ಕೆ ಆಚಾರ್ಯ ಬಿ.ಎಂ.ಶ್ರೀ, ಮಹಾಕವಿಗಳಾದ ಕುವೆಂಪು ಮತ್ತು ಬೇಂದ್ರೆ ತಮ್ಮ ಸಮ್ಮತಿ ನೀಡಿದರು. ಭುವನೇಶ್ವರಿಯ ಪರಿಕಲ್ಪನೆ ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಕನ್ನಡಿಗರನ್ನು ಒಂದುಗೂಡಿಸಿತು. ಅಲ್ಲಿಂದ ಮುಂದೆ ಕನ್ನಡಪರ ಹೋರಾಟಗಳಲ್ಲೆಲ್ಲಾ ಭುವನೇಶ್ವರಿಯನ್ನು ಕನ್ನಡದ ಕುಲದೇವತೆಯನ್ನಾಗಿ ನೋಡಿದ್ದನ್ನು ಕಾಣ ಬಹುದು. ಸುದೀರ್ಘ ಇತಿಹಾಸವನ್ನು ಹೊಂದಿರುವ ತಾಯಿ ಭುವನೇಶ್ವರಿ ತಾಯಿಯ ಇತಿಹಾಸದಲ್ಲಿ ಎಲ್ಲಿಯೂ ಮತೀಯ ನೆಲೆಗಟ್ಟು ಇರುವುದು ಕಾಣುವುದಿಲ್ಲ.
ಈ ಶ್ರೀಮಂತ ಪರಂಪರೆಗೆ ಮನ್ನಣೆ ನೀಡಿ ಕನ್ನಡ ಸಾಹಿತ್ಯ ಪರಿಷತ್ತು ಬಹು ಸಂಖ್ಯಾತ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ 17-11-2022 ರಂದು ತನ್ನ ಆವರಣದಲ್ಲಿ ಭುವನೇಶ್ವರಿ ಸೇವಿಯ ಪುತ್ಥಳಿಯನ್ನು ಕನ್ನಡಿಗರೆಲ್ಲರ ಅಸ್ಮಿತೆಯ ಬಿಂಬವಾಗಿ ಸ್ಥಾಪಿಸಿತು. ಇದರ ಅನಾವರಣದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಎಸ್. ಆರ್. ಬೊಮ್ಮಾಯಿಯವರು, ಭಾರತದ ಸರ್ವೋಚ್ಚ ನ್ಯಾಯಾಲಯ್ದ ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ ಪಾಟೀಲರು, ಸುತ್ತೂರು ಶ್ರೀಗಳಾದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಬರಹಗಾರ್ತಿ ಶ್ರೀಮತಿ ಸಂಧ್ಯಾ ಪೈ, ಕನ್ನಡದ ಮೊದಲ ನಿಘಂಟುಕಾರ ರೆವೆರೆಂಡ್ ಫರ್ಡಿನೆಂಡ್ ಕಿಟ್ಟಲ್ ಅವರ ಮರಿ ಮೊಮ್ಮಗಳು ಶ್ರೀಮತಿ ಆಲ್ಮತ್ ಕಿಟ್ಟಲ್ ಸೇರಿದಂತೆ ಹಲವಾರು ಗಣ್ಯರು ಭಾಗಿಗಳಾಗಿ ಭುವನೇಶ್ವರಿಯ ಪುತ್ಥಳಿಯ ಸ್ಥಾಪನೆಯ ಮಹತ್ವವನ್ನು ಮೆಚ್ಚಿಕೊಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಈ ಮಹತ್ವದ ಕಾರ್ಯಕ್ಕಾಗಿ ಅಭಿನಂದಿಸಿದ್ದರು. ನಾಡಿನ ಎಲ್ಲಾ ಪತ್ರಿಕೆಗಳೂ ಕೂಡ ಈ ಕಾರ್ಯಕ್ರಮವನ್ನು ವಿವರವಾಗಿ ಬಣ್ಣಿಸಿದ್ದವು ಎಂದು ನಾಡೋಜ ಡಾ.ಮಹೇಶ ಜೋಶಿ ಪುತ್ಥಳಿಯ ಮಹತ್ವವನ್ನು ಒತ್ತಿ ಹೇಳಿದ್ದರು.
ಶ್ರೀನಾಥ್ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.