ಸಿದ್ದರಾಮಯ್ಯ ಅವರೇ ಕೇಂದ್ರದಿಂದ ಅಕ್ಕಿ ತರಿಸಿಕೊಂಡು ಅನ್ನರಾಮಯ್ಯ ಎಂದು ಕರೆಸಿಕೊಂಡಿರಿ! | JANATA NEWS
ಬೆಂಗಳೂರು : ಸಿದ್ದರಾಮಯ್ಯ ಅವರೇ ಕೇಂದ್ರದಿಂದ ಅಕ್ಕಿ ತರಿಸಿಕೊಂಡು ಅನ್ನರಾಮಯ್ಯ ಎಂದು ಕರೆಸಿಕೊಂಡಿರಿ, ಅಪ್ಪಿ ತಪ್ಪಿಯೂ ಕೇಂದ್ರ ಸರ್ಕಾರದ ಕೊಡುಗೆ ಕುರಿತು ಎಲ್ಲೂ ಉಲ್ಲೇಖಿಸುವ ಔದಾರ್ಯವಿಲ್ಲ ನಿಮ್ಮಲ್ಲಿಲ್ಲ ಎಂದು ಬಿವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು.
ಮೊದಲು ಅಕ್ಕಿ ನೀಡುತ್ತೇನೆ ಎಂದಿದ್ದ ಕೇಂದ್ರ ಸರ್ಕಾರ, ಇದೀಗ ರಾಜ್ಯಕ್ಕೆ ಅಕ್ಕಿ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಅವರು, ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಬಿ. ವೈ ವಿಜಯೇಂದ್ರ ಪ್ರತಿಕ್ರಿಯಿಸಿ, ಉಚಿತ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಅಕ್ಕಿ ಒದಗಿಸುತ್ತಿಲ್ಲ ಎಂದು ಆರೋಪಿಸುತ್ತೀದ್ದೀರಿ?. ಈ ಹಿಂದೆಯೂ ನಿಮ್ಮ ಆಡಳಿತ ಅವಧಿಯಲ್ಲಿ ಕೇಂದ್ರದಿಂದ ಅಕ್ಕಿ ತರಿಸಿಕೊಂಡು ಅನ್ನರಾಮಯ್ಯ ಎಂದು ಕರೆಸಿಕೊಂಡಿರಿ, ಅಪ್ಪಿ ತಪ್ಪಿಯೂ ಕೇಂದ್ರ ಸರ್ಕಾರದ ಕೊಡುಗೆ ಕುರಿತು ಎಲ್ಲೂ ಉಲ್ಲೇಖಿಸುವ ಔದಾರ್ಯ ತೋರಲೇ ಇಲ್ಲ, ಇದೀಗ ಅಕ್ಕಿ ಯೋಜನೆ ಜಾರಿಗೆ ತರುವಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ನಿಮ್ಮ ಸರ್ಕಾರದ ವೈಫಲ್ಯ ಅನಾವರಣಗೊಳ್ಳುವ ಆತಂಕದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ನಿಮ್ಮ ದಿಕ್ಕು ತಪ್ಪಿಸುವ ತಂತ್ರ ಅರ್ಥಮಾಡಿಕೊಳ್ಳದೇ ಇರುವಷ್ಟು ನಮ್ಮ ಜನ ಮುಗ್ಧರಲ್ಲ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯರವರೇ, ಪುಕ್ಕಟೆ ವಿದ್ಯುತ್ ಅಂತ ವಿದ್ಯುತ್ ದರ ಏರಿಸಿದಿರಿ. ಗೃಹಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ. ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತ ನವರಂಗಿ ನಾಟಕ ಮಾಡುತ್ತಿದ್ದೀರಿ. ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ ನಮ್ಮ ವಿಷಾದ, ಅಕ್ಕಿ ಕೊಡುವ ಮೊದಲೇ ಕೇಂದ್ರದ ಕಡೆ ಕೈ ತೋರಿಸಿ ನಿರೀಕ್ಷಣಾ ಜಾಮೀನು ಪಡೆಯುವ ನಿಮ್ಮ ಗ್ಯಾರಂಟಿ ಹುನ್ನಾರ ನಾಡಿನ ಸಮಸ್ತ ಜನರಿಗೆ ಅರ್ಥವಾಗಿದೆ ಸ್ವಾಮಿ ಎಂದು ಟ್ವಿಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದೀಗ ಕಾಂಗ್ರೆಸ್ ಸರ್ಕಾರ ಅಕ್ಕಿ ಯೋಜನೆ ಜಾರಿಗೆ ತರುವಲ್ಲಿ ಸಹಾಯಕ ಪರಿಸ್ಥಿತಿಯಲ್ಲಿದೆ. ನಿಮ್ಮ ಸರ್ಕಾರದ ವೈಫಲ್ಯ ಅನಾವರಣಗೊಳ್ಳುವ ಆತಂಕದಲ್ಲಿ ನೀವಿದ್ದು, ವಿನಾಃಕಾರಣ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ಈ ಮೂಲಕ ಜನರ ದಿಕ್ಕು ತಪ್ಪಿಸುವ ನಿಮ್ಮ ಅರಿಯದಷ್ಟು ಜನರೇನು ಮುಗ್ಧರಲ್ಲ ಎಂದು ಶಾಕಸರು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಅದಷ್ಟೇ ಅಲ್ಲದೇ, ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಸಭೆ ನಡೆಸಿರುವುದು ಎಷ್ಟು ಸರಿ ಎಂದು ಬಿವೈ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಸರ್ಕಾರ ಹಾಗೂ ಬಿಬಿಎಂಪಿಯೊಂದಿಗೆ ಯಾವುದೇ ರೀತಿಯ ಸಂಬಂಧವಿರದ ವ್ಯಕ್ತಿ 'ಉನ್ನತ ಅಧಿಕಾರಿಗಳ ಸಭೆ ನಡೆಸುವುದು' ನಾಡಿನ ಮತದಾರರಿಗೆ ಮಾಡುತ್ತಿರುವ ಅಪಚಾರ. ನೆನ್ನೆ ನಡೆದ ಸಭೆ ಪರ್ಸಂಟೇಜ್ ಫಿಕ್ಸ್ ಮಾಡುತ್ತಿರುವ ಸಭೆಯೋ? ಅಥವಾ ನಿಮ್ಮ ಹೈಕಮಾಂಡ್ ನಾಯಕರಿಗೆ ರಾಜ್ಯವನ್ನು ATM ಮಾಡಿಕೊಡುವ ವ್ಯವಸ್ಥೆಯೋ? ಎಂದು ಹರಿಹಾಯ್ದಿದ್ದಾರೆ.