ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಕಾರ್ಕಳದ ಉಪನ್ಯಾಸಕರಿಬ್ಬರು ನೀರುಪಾಲು | JANATA NEWS

ಶಿವಮೊಗ್ಗ : ತುಂಗಾನದಿಯಲ್ಲಿ ಈಜಲು ತೆರಳಿದ್ದ ಉಪನ್ಯಾಸಕರಿಬ್ಬರು ನೀರುಪಾಲಾಗಿರುವಂತ ಘಟನೆ ನಡೆದಿದೆ. ಈ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೋರ್ವನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.
ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಪ್ರಾಧ್ಯಾಪಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೀರ್ಥ ಮತ್ತೂರು ಗ್ರಾಮದ ಬಳಿ ನಡೆದಿದೆ. ಮೃತರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಪಿಯು ಕಾಲೇಜಿನ ಪ್ರಾಧ್ಯಾಪಕರಾದ ಪುನೀತ್ (36) ಹಾಗೂ ಬಾಲಾಜಿ (36) ಎಂದು ಗುರುತಿಸಲಾಗಿದೆ.
ಉಪನ್ಯಾಸಕರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ಇರುವ ಹೋಂ ಸ್ಟೇಯಲ್ಲಿ ತಂಗಿದ್ದರು. ಬಳಿಕ ಇಂದು ಬೆಳಗ್ಗೆ ತಿಂಡಿ ತಿಂದು ನದಿಯ ಬಳಿಗೆ ಈಜಲು ಹೋಗಿದ್ದಾರೆ.
ಈ ವೇಳೆ ಈಜಲು ನದಿಗಿಳಿದ ಪುನೀತ್ ಅವರು ನದಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇನ್ನು ಇವರನ್ನು ರಕ್ಷಿಸಲು ಹೋದ ಬಾಲಾಜಿ ಅವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೋರ್ವ ಉಪನ್ಯಾಸಕರ ಮೃತದೇಹ ಪತ್ತೆಗಾಗಿ ಸ್ಥಳಕ್ಕೆ ಆಗಮಿಸಿರುವಂತ ಅಗ್ನಿಶಾಮಕ ಸಿಬ್ಬಂದಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ.