ರಾಜ್ಯ ಸರ್ಕಾರದ ಸರ್ವರ್‌ಗಳನ್ನು ಕೇಂದ್ರ ಹ್ಯಾಕ್ ಮಾಡಿದೆ: ಸತೀಶ್ ಜಾರಕಿಹೊಳಿ | JANATA NEWS
ಬೆಂಗಳೂರು : ರಾಜ್ಯ ಸರ್ಕಾರದ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಅದೇ ಕಾರಣಕ್ಕೆ ರಾಜ್ಯಾದ್ಯಂತ ಉಚಿತ ಯೋಜನೆಗಳಿಗೆ ಅರ್ಜಿ ಹಾಕುವಾಗ ಸರ್ವರ್ ಸಮಸ್ಯೆ ಉಂಟಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ನಮ್ಮ ಸರ್ವರ್ ಹಾಗೂ ಸಿಸ್ಟಮ್ಗಳನ್ನು ಇವಿಎಂ ಮಾದರಿಯಲ್ಲಿ ಹ್ಯಾಕ್ ಮಾಡಿದೆ. ಇದರಿಂದ ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಆನ್ಲೈನ್ನಲ್ಲಿ ಸಮಸ್ಯೆ ಹೆಚ್ಚಾದರೆ, ನೇರವಾಗಿ(ಆಫ್ಲೈನ್) ಅರ್ಜಿ ಸ್ವೀಕಾರಿಸುತ್ತೇವೆ. ಇದರಿಂದ ಒಂದು ತಿಂಗಳು ತಡ ಆಗಬಹುದು, ಅದಕ್ಕಿಂತ ಹೆಚ್ಚೇನು ಆಗುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಪ್ಲ್ಯಾನ್ ಮಾಡದೇ ಯೋಜನಗಳನ್ನ ಜಾರಿಗೆ ತರ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ಲ್ಯಾನ್ ಮಾಡಿದ್ದೇವೆ, ನಮ್ಮ ಮಷಿನ್ ಹ್ಯಾಕ್ ಮಾಡಿ ಕೇಂದ್ರದವರು ಸ್ಟಾಪ್ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.
ಇವಿಎಂ ಮಾದರಿಯಲ್ಲಿ ಕೇಂದ್ರ ಸರ್ಕಾರ ಹ್ಯಾಕ್ ಮಾಡಿ ಸರ್ವರ್ ಡೌನ್ ಆಗುವಂತೆ ಮಾಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಇಲಾಖೆಯ ಸರ್ವರ್ ಕೂಡ ಹ್ಯಾಕ್ ಆಗಿದೆ. ಇದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟೇ ಹ್ಯಾಕ್ ಮಾಡಿದರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ ಎಂದರು.