ಐದು ಕೆಜಿ ಅಕ್ಕಿ ಬದಲಿಗೆ ಹಣ: ತಿಂಗಳಿಗೆ ₹170 ನೀಡಲು ಸರ್ಕಾರ ತೀರ್ಮಾನ | JANATA NEWS

ಬೆಂಗಳೂರು : ಕಾಂಗ್ರೆಸ್ ಚುನಾವಣಾಪೂರ್ವ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಅಕ್ಕಿ ವಿತರಣೆಗೆ ತೊಡಕಾಗಿರುವುದರಿಂದ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಕುರಿತು ಆಹಾರ ಸಚಿವ ಮುನಿಯಪ್ಪ ಮಾಹಿತಿ ನೀಡಿದರು.
ಸಂಪುಟ ಸಭೆಯ ಬಳಿಕ ಮಾತನಾಡಿದ ಕೆ.ಎಚ್. ಮುನಿಯಪ್ಪ, ಸಿಎಂ ಆದೇಶದಂತೆ ಹೆಚ್ಚುವರಿ ಅಕ್ಕಿಗಾಗಿ ಸಾಕಷ್ಟು ಪ್ರಯತ್ನ ಮಾಡಿದೆವು. ಕೇಂದ್ರ ಸಚಿವರನ್ನು ಭೇಟಿ ಮಾಡಿದೆವು. ಕೇಂದ್ರದ ಬಳಿ ಸಾಕಷ್ಟು ಸ್ಟಾಕ್ ಇದೆ. ನಮಗೆ ಅಕ್ಕಿಕೊಡಿ, ನಾವು ಹಣ ಕೊಡ್ತೇವೆ ಎಂದು ಕೇಳಿದೆವು. ಆದರೆ, ಅವರು ಕೊಡಲು ಆಗುವುದಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುತ್ತಿದೆ, ಇದನ್ನ ಹೊರತು ಪಡಿಸಿ ಕಾಂಗ್ರೆಸ್ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಕಳೆದ ತಿಂಗಳು FCI ರಾಜ್ಯಗಳಿಗೆ ಅಕ್ಕಿ ನೀಡಲು ತಿರಸ್ಕಾರ ಕಾರಣ ಕರ್ನಾಟಕ ರಾಜ್ಯಕ್ಕೆ 2.5 ಲಕ್ಷ ಟನ್ ಅಕ್ಕಿ ಈವರೆಗೂ ದೊರಕಿಲ್ಲ. ಜುಲೈ 1 ರಿಂದ ಅನ್ನ ಭಾಗ್ಯ ಯೋಜನೆ ಜಾರಿ ಆಗುವ ಕಾರಣ ಪ್ರತಿ BPL ಕಾರ್ಡ್ ಹೊಂದಿದವರಿಗೆ ಪ್ರತಿ ಕೆಜಿಗೆ ₹34 ರಂತೆ ಒಟ್ಟು ಐದು ಕೆಜಿಗೆ ₹170 ನೀಡಲಾಗುವುದು, ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
ಅಕ್ಕಿ ಸಿಗುವವರೆಗೆ ಮಾತ್ರ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡುತ್ತಿದ್ದೇವೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದ್ದಾರೆ.
ಹಣ ನೀಡುವ ಬಗ್ಗೆ ವಿವರಿಸಿದ ಸಚಿವ ಮುನಿಯಪ್ಪ, ಈ ಯೋಜನೆ ಅನುಷ್ಠಾನ ಮಾಡಲು (ಪರ್ಯಾಯವಾಗಿ ಹಣ ನೀಡಲು) ಸುಮಾರು ₹700 ಕೋಟಿ ಆಗಲಿದೆ. ಇದು ಪರ್ಯಾಯ ವ್ಯವಸ್ಥೆ ಅಷ್ಟೇ, ಮುಂದೆ ಸರ್ಕಾರ ಟೆಂಡರ್ ಮೂಲಕ ಅಕ್ಕಿ ಪಡೆದು ಅನ್ನ ಭಾಗ್ಯ ಮೂಲಕ ಕಾಂಗ್ರೆಸ್ ಹೇಳಿದಂತೆ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲಾಗುವುದು ಎಂದು ಸಂಪುಟ ತೀರ್ಮಾನ ಬಗ್ಗೆ ವಿವರಿಸಿದರು.